ಜಿಲ್ಲೆ

ಪೊಲೀಸರ ಟಾರ್ಚರ್​ ತಾಳಲಾರದೇ ನೇಣಿಗೆ ಶರಣಾದ ವ್ಯಕ್ತಿ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು

ಕಲಬುರಗಿ: ಪೊಲೀಸರ ಕಿರುಕುಳ ಸಹಿಸಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಹಾಬಾದ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ನಡೆದಿದ್ದು, ಡೆತ್​ನೋಟ್​ ಪತ್ತೆಯಾಗಿದೆ.

ಮನೋಜ ಸಿಂಧೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮನೋಜ್​ ಅವರ ಹೆಂಡತಿಯ ಅಣ್ಣನ ಮಗು ಕಾಣೆಯಾಗಿದ್ದು, ನೀನೇ ತೆಗೆದುಕೊಂಡು ಹೋಗಿದ್ದಿಯಾ ಅಂತಾ ಮನೋಜ್​ನನ್ನು ಪೊಲೀಸರು ಟಾರ್ಚರ್ ಮಾಡಿದ್ದಾರೆ ಎಂಬ ಆರೋಪ ಇದೆ.

ಎರಡು ದಿನ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ನಾನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಇವತ್ತು ಬಿಟ್ಟಿದ್ದೇವೆ, ನಾಳೆ ನಿನ್ನ ಹೆಂಡತಿಯನ್ನೂ ಕೂಡ ಕರೆದುಕೊಂಡು ಬಂದು ಇಬ್ಬರಿಗೂ ಟಾರ್ಚರ್ ಮಾಡುತ್ತವೇ ಎಂದು ಬೆದರಿಕೆ ಹಾಕಿದರು ಅಂತಾ ಡೆತ್​ನೋಟ್​ ಬರೆದಿಟ್ಟು ಮನೋಜ್​ ಸಾವಿನ ಹಾದಿ ಹಿಡಿದಿದ್ದಾನೆ.

ನನ್ನ ಹೆಂಡತಿ ಮತ್ತು ಮಕ್ಕಳನ್ನು ಅರ್ಧದಲ್ಲಿ ಕೈಬಿಟ್ಟು ಹೋಗುತ್ತಿರುವುದು ನನ್ನ ತಪ್ಪು ಎಂದು ತುಂಬಾ ನೋವಿನಲ್ಲಿ ಡೆತ್​ನೋಟ್​ನಲ್ಲಿ ಮನೋಜ್​ ಬರೆದಿದ್ದಾರೆ. ಇದಲ್ಲದೆ, ಕಿರುಕುಳ ಕೊಟ್ಟ ಪೇದೆಗಳ ಹೆಸರನ್ನು ಉಲ್ಲೇಖಿಸಿದ್ದಾರೆ. (ದಿಗ್ವಿಜಯ ನ್ಯೂಸ್​)