ಜಿಲ್ಲೆ

ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ, ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ವ್ಯರ್ಥ ಪ್ರಯತ್ನ: ಮಾಜಿ ಸಿಎಂ ಎಚ್​ಡಿಕೆ ಟೀಕೆ

ಬೆಂಗಳೂರು: 'ಸಾವುಗಳನ್ನೇ ಸಾಧನೆಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿದೆ‌. ಕೊನೆಗೂ ಸರ್ಕಾರ ಜನೋತ್ಸವ ರದ್ದು ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ಜನೋತ್ಸವ ರದ್ದು ಮಾಡಿ ಸರ್ಕಾರ ಮುಖ ಉಳಿಸಿಕೊಂಡಿದೆ. ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರಕಾರದ ವರ್ಷದ ಸಾಧನೆ!! ಎಂದು ಲೇವಡಿ ಮಾಡಿದ್ದಾರೆ.

ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ʼಮತಕ್ಕಾಗಿ ಕೋಮು ಗಳʼ ಇರಿಯುವುದಾ ಸಾಧನೆ? ಎಂದು ಪ್ರಶ್ನಿಸಿದ್ದಾರೆ.

ಇನ್ನೆಷ್ಟು ಕಗ್ಗೊಲೆ ಆಗಬೇಕು:

ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರ್ಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ ʼಕೃತಕ ಸಾಂತ್ವನʼ ಹೇಳಿದರೇನು ಪ್ರಯೋಜನ? ಎಂದು ಕೇಳಿದ್ದಾರೆ.

ಮತಕ್ಕಾಗಿ ಮರಣ ಮೃದಂಗ:

ತಾಯಿಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ʼನಾದʼದಂತೆ ಕೇಳುತ್ತಿವೆಯಾ? ಬಿಜೆಪಿಯ ʼಮತಕ್ಕಾಗಿ ಮರಣಮೃದಂಗʼದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ.

ಇವಾ ಸರ್ಕಾರದ ಸಾಧನೆ?

ಏನು ಸಾಧನೆ ಅಂತ ಸರ್ಕಾರ ಜನರಿಗೆ ಹೇಳುತ್ತದೆ?

*40% ಕಮಿಷನ್

*ಕೋವಿಡ್ ಹೆಸರಿನಲ್ಲಿ ಕೊಳ್ಳೆ

*ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್‌ ಕೋಟಾ

*ಪಿಎಸ್ಐ ನೇಮಕದಲ್ಲಿ ಕಾಸಿನಾಟ

*ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ.

ಧನದಾಟ ಬಿಟ್ಟರೆ ಏನಿದೆ?

ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರ್ಕಾರ ಮಾಡಿದ್ದೇನು? ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಸತ್ತ ಸರಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ. ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ʼನರಹಂತಕ ರಾಜಕಾರಣʼ ನಿಲ್ಲಲಿ ಎಂದು ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.