ಜಿಲ್ಲೆ

ಸ್ವಂತ ತಮ್ಮನ ದುರ್ವರ್ತನೆ ಸಹಿಸದೇ ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ: ರಾಯಚೂರಿನಲ್ಲಿ ಘಟನೆ

ರಾಯಚೂರು: ರಾಯಚೂರಿನ ಸಾಥ್ ಮೈಲ್ ಬಳಿ ಪತ್ತೆಯಾಗಿದ್ದ ಶವದ ಮಾಹಿತಿ ಬಹಿರಂಗವಾಗಿದ್ದು, ಅಣ್ಣನಿಂದಲೇ ಸ್ವಂತ ತಮ್ಮನ ಕೊಲೆಯಾಗಿರುವುದಾಗಿ ವರದಿಯಾಗಿದೆ.

ಶರಣಬಸವ (23) ಕೊಲೆಯಾದ ಯುವಕ. ಆರೋಪಿ ಶಶಿಕುಮಾರ್​ ಮೃತ ಶರಣಬಸವನ ಸ್ವಂತ ಅಣ್ಣ. ತಮ್ಮನನ್ನು ಹತ್ಯೆಗೈದು ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ. ಇಬ್ಬರು ರಾಯಚೂರಿನ ಜನತಾ ಕಾಲೊನಿಯ ನಿವಾಸಿಗಳು.

ಶರಣಬಸವ ಪ್ರತಿನಿತ್ಯ ಮದ್ಯಪಾನ ಮಾಡಿ ಮನೆಯಲ್ಲಿ ಜಗಳವಾಡುತ್ತಿದ್ದನಂತೆ. ಕುಡಿದ ಅಮಲಿನಲ್ಲಿ ನಿತ್ಯ ತಾಯಿ ಮೇಲೆ ಹಲ್ಲೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ದಿನೇ ದಿನೇ ಶರಣಬಸವನ ಕಿರುಕುಳ ಹೆಚ್ಚಾಗಿದ್ದಕ್ಕೆ ಅದನ್ನು ಸಹಿಸದೇ ಕೊಲೆ ಮಾಡಿರುವುದಾಗಿ ಆರೋಪಿ ಅಣ್ಣನೇ ಒಪ್ಪಿಕೊಂಡಿದ್ದಾರೆ.

ಘಟನೆ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)