ಬೆಂಗಳೂರು: ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ಸಪ್ಲೈಯರ್ ಗೆ ನಟ ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್ ನಿಂದ ಹಲ್ಲೆ ಆರೋಪ. ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಗುರುವಾರ ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಪಾಪಣ್ಣ ವಿರುದ್ಧ ಆಕ್ರೋಶ ಹೊರಹಾಕಿದರು. ಹೋಟೆಲ್ನಲ್ಲಿ ದಲಿತ ಸಪ್ಲೈಯರ್ಗೆ ಹಲ್ಲೆ ನಡೆಸಿ ಸಿಸಿಟಿವಿ ದೃಶ್ಯಾವಳಿ ನಾಶ ಮಾಡಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ರಾಜೀ ಸಂಧಾನ ಮಾಡಿ ಕಳುಹಿಸಿದ್ದಾರೆ. ಅಂದರೆ ಪೊಲೀಸ್ ಠಾಣೆಗಳು ಸಟ್ಲಮೆಂಟ್ ಕೇಂದ್ರಗಳು ಆಗುತ್ತಿವೆ. ಮೈಸೂರು ಪೊಲೀಸರು ಬಳೆ ತೊಟ್ಟು ಕೊಂಡಿದ್ದೀರಾ? ಎಂದು ಕಿಡಿಕಾರಿದರು.
25 ಕೋಟಿ ರೂ. ಸಾಲದ ಪ್ರಕರಣದಲ್ಲಿ ಸಿಲುಕಿರುವ ಅರುಣಾ ಕುಮಾರಿಗೆ ಬೆದರಿಕೆ ಒಡ್ಡಿದ್ದಾರೆ. ಆಕೆಯನ್ನು ಮೈಸೂರು ರಸ್ತೆ ರಾಜರಾಜೇಶ್ವರಿ ಗೇಟ್ ಬಳಿ ಕರೆಸಿಕೊಂಡು ಇನೋವಾ ಕಾರಿನಲ್ಲಿ ಕೂರಿಸಿಕೊಂಡು ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಮನೆಗೆ ಮತ್ತು ತೋಟದ ಮನೆಗೆ ಯಾಕೆ ಕರೆಸಿಕೊಂಡರು ಎಂದು ಇಂದ್ರಜಿತ್ ಪ್ರಶ್ನಿಸಿದರು.
ಅರುಣಾಕುಮಾರಿ ಎಂಬುದು ಒಂದು ಪಾತ್ರವಷ್ಟೇ. ಆಕೆಯ ಹಿಂದೆ ದೊಡ್ಡ ದಂಧೆ ಇದೆ. ಅರುಣಾಕುಮಾರಿ ನನಗೆ ಪರಿಚಯ ಇಲ್ಲ. ನ್ಯಾಯ ದೊರಕಬೇಕು. ಸೆಟಲ್ಮೆಂಟ್ ಮಾಡಲಾಗುತ್ತಿದೆ. ದರ್ಶನ್ ಮತ್ತು ನಿರ್ಮಾಪಕ ಒಂದಾದರೆ ಸಾಕಾ? ಇನ್ನೂ ತನಿಖೆ ಹಂತದಲ್ಲಿದೆ. ಸಾಮಾನ್ಯರು ಜೈಲಿಗೆ ಹೋಗುತ್ತಿದ್ದಾರೆ. ಸೆಲೆಬ್ರಿಟಿಗಳು ಸೆಟಲ್ಮೆಂಟ್ ಮಾಡಿಕೊಳ್ಳುತ್ತಾರೆ.