ಜಿಲ್ಲೆ

ಟ್ರ್ಯಾಕ್ಟರ್​ ಹರಿದು ಗಾಯಗೊಂಡಿದ್ದ ಬಾಲಕ ಸಾವು: ಪಶ್ಚತ್ತಾಪದಿಂದ ಆತ್ಮಹತ್ಯೆಗೆ ಶರಣಾದ ಪಿಎಚ್​ಡಿ ವಿದ್ಯಾರ್ಥಿ!

ಚಾಮರಾಜನಗರ: ಟ್ರ್ಯಾಕ್ಟರ್​ ಹರಿದು ಗಾಯಗೊಂಡಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದಕ್ಕೆ ಮನನೊಂದ ಟ್ರ್ಯಾಕ್ಟರ್​​ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ಘಟನೆ.

ಸವಕನಪಾಳ್ಯದ ಬಾಲಕ ಹರ್ಷ (5) ಮತ್ತು ಸುನೀಲ್​ (23) ಮೃತ ದುರ್ದೈವಿಗಳು. ಕ್ರಿಕೆಟ್​ ಟೂರ್ನಮೆಂಟ್​ಗಾಗಿ ಗುರುವಾರ ಮೈದಾನವನ್ನು ಟ್ರ್ಯಾಕ್ಟರ್​ ಮೂಲಕ ಸಮತಟ್ಟು ಮಾಡಲಾಗುತ್ತಿತ್ತು. ಈ ವೇಳೆ ಸುನೀಲ್​ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ. ಸಮತಟ್ಟು ಮಾಡುವುದನ್ನು ನೋಡುತ್ತಾ ನಿಂತಿದ್ದ ಹರ್ಷನಿಗೆ ಟ್ರ್ಯಾಕ್ಟರ್​ ಡಿಕ್ಕಿ ಹೊಡೆಸು, ಗಂಭೀರವಾಗಿ ಗಾಯಗೊಂಡಿದ್ದ.

ಇದಾದ ತಕ್ಷಣವೇ ಹರ್ಷನನ್ನು ಮಧ್ಯಾಹ್ನ ಗುಂಡ್ಲುಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹರ್ಷ ಇಹಲೋಕ ತ್ಯಜಿಸಿದ. ಇತ್ತ ಘಟನೆ ನಂತರ ಸುನೀಲ್​ ಮೈಸೂರಿಗೆ ಪರಾರಿಯಾಗಿದ್ದ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸುನೀಲ್​ ಪಿಎಚ್​ಡಿ ಮಾಡುತ್ತಿದ್ದಾನೆ. ಬಾಲಕ ಮೃತಪಟ್ಟ ಸುದ್ದಿ ತಿಳಿದು ಮೈಸೂರಿನ ತನ್ನ ರೂಮಿನಲ್ಲೇ ಸುನೀಲ್​ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಟೂರ್ನಮೆಂಟ್​ಗಾಗಿ ಮೈದಾನ ಸಮತಟ್ಟು ಮಾಡಲು ಗ್ರಾಮಸ್ಥರೊಬ್ಬರು ಟ್ರ್ಯಾಕ್ಟರ್​ ಪಡೆದು ಸುನೀಲ್​ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)