ಜಿಲ್ಲೆ

ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಕಡಿತಗೊಳಿಸದಿರಲು ಲಂಚ: 5 ಲಕ್ಷ ಸ್ವೀಕರಿಸುವಾಗ ಎಸಿಬಿ ಬಲೆಗೆ ಬೆಸ್ಕಾಂ ಎಇಇ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತ ಮಾಡದೇ ಇರಲು 9 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್, ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಸಿಲುಕಿದ್ದಾರೆ.

ಬೆಸ್ಕಾಂ ನಾಗವಾರ ಉಪ ವಿಭಾಗ ಎಇಇ ಸುಂದರೇಶ್ ನಾಯ್ಕ ಬಂಧಿತರು. ಚೆಲ್ಲಿಕೆರೆ ನಿವಾಸಿ ಟೆಲಿಕಾಂ ಲೇಔಟ್‌ನಲ್ಲಿ ನಿಯಮ ಉಲ್ಲಂಘಿಸಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಪರಿಶೀಲನೆ ಮಾಡಿದ ಬೆಸ್ಕಾಂ ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ನೀಡಿರುವ ವಿದ್ಯುತ್ ಸಂಪರ್ಕ ಸ್ಥಗಿತ ಮಾಡುವುದಾಗಿ ತಿಳಿಸಿದ್ದರು. ಈ ಬಗ್ಗೆ ದೂರುದಾರರು, ನಾಗವಾರ ಉಪ ವಿಭಾಗ ಬೆಸ್ಕಾಂ ಕಚೇರಿಗೆ ಹೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಅದಕ್ಕೆ ಎಇಇ ಸುಂದರೇಶ್ ನಾಯ್ಕ, ಕರೆದು ವಿದ್ಯುತ್ ಸಂಪರ್ಕ ಮುಂದುವರಿಸಲು 9 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.

ಇದಕ್ಕೆ ಒಪ್ಪದ ಅಪಾರ್ಟ್‌ಮೆಂಟ್ ಮಾಲೀಕ, ಎಸಿಬಿಗೆ ದೂರು ನೀಡಿದ್ದರು. ಈ ಮೇರೆಗೆ ಫೆ.16ರಂದು ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಚೇರಿಯಲ್ಲಿ 5 ಲಕ್ಷ ರೂ. ಲಂಚ ಪಡೆಯುವಾಗ ಸುಂದರೇಶ್ ನಾಯ್ಕನನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.