ಜಿಲ್ಲೆ

ನಡು ರಸ್ತೆಯಲ್ಲೇ ಬಡಿದಾಡಿಕೊಂಡ 20 ವಿದ್ಯಾರ್ಥಿನಿಯರು: ಜಡೆ ಜಗಳದ ಹಿಂದಿನ ಕಾರಣ ಬಹಿರಂಗ!

ಬೆಂಗಳೂರು: ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರು ಕೈ ಕೈ ಮಿಲಾಯಿಸಿರುವ ಘಟನೆ ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್​ ಆದ ಬಳಿಕ ಈ ಪ್ರಕರಣ ಎಲ್ಲರ ಗಮನ ಸೆಳೆದಿದೆ. ಆದರೆ, ಜಡೆ ಜಗಳದ ಹಿಂದಿರುವ ಕಾರಣ ಏನೆಂಬುದು ಯಾರಿಗೂ ತಿಳಿದಿರಲಿಲ್ಲ. ಇದೀಗ ಆ ಕಾರಣ ಬಯಲಾಗಿದೆ.

ಸುಮಾರು 20 ವಿದ್ಯಾರ್ಥಿನಿಯರು ಸೆಂಟ್ ಮಾರ್ಕ್ಸ್​ನ ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದರು. ಕೈಯಲ್ಲಿ ಬೇಸ್​ ಬಾಲ್​ ಬ್ಯಾಟ್ ಹಾಗೂ ಹಾಕಿ ಸ್ಟಿಕ್​​ ಹಿಡಿದು ಹೊಡೆದಾಡಿಕೊಂಡಿದ್ದರು. ವಿದ್ಯಾರ್ಥಿನಿಯರ ಪಾಲಕರು ಕೂಡ ಗಲಾಟೆಯಲ್ಲಿ ಭಾಗಿಯಾಗಿದ್ದರು. ಎರಡು ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳ ನಡುವೆ ಈ ಮಾರಾಮಾರಿ ನಡೆದಿತ್ತು.

ದಿಗ್ವಿಜಯ ನ್ಯೂಸ್​ಗೆ ಬಂದಿರುವ ಮಾಹಿತಿ ಪ್ರಕಾರ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸುಮಾರು 20 ರಿಂದ 25 ನಿಮಿಷಗಳ ಕಾಲ ವಿದ್ಯಾರ್ಥಿನಿಯರು ಕಿತ್ತಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ 5ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಎರಡು ಪ್ರತಿಷ್ಠಿತ ಶಾಲೆಗಳಿಗೂ ಮಾಹಿತಿ ಸಿಕ್ಕಿಲ್ಲ. ಆದರೆ, ಮೂಲಗಳ ಪ್ರಕಾರ ಶಾಲೆಯ ರ‍್ಯಾಂಕಿಂಗ್​​ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ರ‍್ಯಾಂಕಿಂಗ್​​ನಲ್ಲಿ ನಮ್ಮ ಶಾಲೆ ಗ್ರೇಟ್​ ಎನ್ನುವ ವಿಚಾರದಲ್ಲಿ ಎರಡು ಪ್ರತಿಷ್ಠಿತ ಶಾಲೆಗಳ ನಡುವೆ ಆರಂಭವಾದ ವಾಗ್ವಾದ ಜಡೆ ಜಗಳದಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.

ಗಲಾಟೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿ ಕೇಸ್ ದಾಖಲಾಗಿಲ್ಲ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ವಿಡಿಯೋವಂತೂ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)