ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ. ದುರಂತವೆಂದರೆ, ಮದುವೆ ಆಗಬೇಕಿದ್ದ ಯುವತಿಯ ಜತೆಯಲ್ಲೇ ಕರುಣಾಸಾಗರ್ ಕೊನೆಯುಸಿರೆಳೆದಿದ್ದಾನೆ.
ಅಪಘಾತಕ್ಕೆ ವೇಗದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. ಅಲ್ಲದೆ, ಸೀಟ್ಬೆಲ್ಟ್ ಧರಿಸದೇ ಇದ್ದಿದ್ದು ಸಾವನ್ನು ಆಹ್ವಾನ ಮಾಡಿದಂತಾಗಿದೆ. ಅಪಘಾತದ ಸಮಯದಲ್ಲಿ ಕಾರಿನ ಏರ್ ಬ್ಯಾಗ್ ಕೂಡ ಓಪನ್ ಆಗದಿರುವುದು ಅವರ ಟೈಂ ಕೂಡ ಕೆಟ್ಟದಾಗಿತ್ತು ಎಂಬುದರ ಸೂಚನೆಯಂತಿದೆ. ಏನೇ ಇರಲಿ ಕಾರನ್ನು ನಿಧಾನವಾಗಿ ಓಡಿಸಿದ್ದರೆ ಅಪಘಾತವೂ ಆಗುತ್ತಿರಲಿಲ್ಲ, ಸಾವು ಕೂಡ ಸಂಭವಿಸುತ್ತಿರಲಿಲ್ಲ.
ಟೇಕ್ ಕೇರ್ ಅಂದ್ರೂ ಡೋಂಟ್ ಕೇರ್!
ಟೇಕ್ ಕೇರ್ ಅಂತ ಹೇಳಿದ್ರೂ ಕೇಳದೆ ವೇಗದ ಚಾಲನೆ ಮಾಡಿ ಕರುಣಾಸಾಗರ್ ಸಾವು ತಂದುಕೊಂಡಿದ್ದಾನೆ. ರಾತ್ರಿ 10.35ಕ್ಕೆ ಕರುಣ್ ಅತಿವೇಗದಿಂದ ಚಾಲನೆ ಮಾಡಿಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಏಳು ಮಂದಿಯನ್ನು ಪೊಲೀಸರು ಗಮನಿಸಿದ್ದರು. ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿ ಚೆಕ್ ಪೋಸ್ಟ್ನಲ್ಲಿ ಕಾರನ್ನು ತಡೆದು ಪರಿಶೀಲನೆ ಮಾಡಲಾಗಿತ್ತು.
ಕಾರು ಅತಿವೇಗದಲ್ಲಿದ್ದರಿಂದ ಕಾರು ತಡೆದು ವೇಗದ ಚಾಲನೆ ಬಗ್ಗೆ ಕಾನ್ಸ್ಟೇಬಲ್ ಪ್ರಶಾಂತ್ ಎಂಬುವರು ಪ್ರಶ್ನೆ ಮಾಡಿದ್ದರು. ಈ ವೇಳೆ ಮನೆಗೆ ಹೋಗ್ತಿರೋದಾಗಿ ಕರುಣ್ ಹೇಳಿದ್ದ. ಇದೇ ರಸ್ತೆಯಲ್ಲಿ ಮನೆಯಿದೆ, ಎಲ್ಲರು ಮನೆಗೆ ಹೋಗ್ತಿದ್ದೀವಿ ಎಂದು ಸಮಜಾಯಿಷಿ ನೀಡಿದ್ದ. ಬಳಿಕ ಕಾನ್ಸ್ಟೇಬಲ್ ಟೇಕ್ ಕೇರ್ ನೈಟ್ ಕರ್ಪ್ಯೂ ಇದೆ. ನಿಧನಾವಾಗಿ ಹೋಗಿ ಗಾಡಿ ಓಡಿಸು ಎಂದು ಸೂಚಿಸಿದ್ದರು.
ಆದರೆ ಇದಾದ ಬಳಿಕ ಎಲ್ಲರು ಪಾರ್ಟಿಗೆ ಹೋಗಿದ್ದರು ಎಂಬ ಮಾಹಿತಿ ಇದೆ. ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ಬರುವಾಗ ವೇಗದ ಚಾಲನೆ ಮಾಡಿಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಅಂದಹಾಗೆ ಕರುಣಾಸಾಗರ್ ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಪುತ್ರ. ಪ್ರಕಾಶ್ ಹೊಸೂರು ಕ್ಷೇತ್ರದಿಂದ ಡಿಎಂಕೆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ನಿನ್ನೆ ಸಂಜೆ ಕಟ್ಟಡದ ಸಾಮಾಗ್ರಿಗಳನ್ನು ಖರೀದಿಸಲು ಕರುಣಾಸಾಗರ್ ಬೆಂಗಳೂರಿಗೆ ಆಡಿ ಕ್ಯೂ 3 ಕಾರಿನಲ್ಲಿ ಬಂದಿದ್ದ. ರಾತ್ರಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯು ದುರಂತ ಅಂತ್ಯ ಕಂಡಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ಕು ಪುರುಷರಾಗಿದ್ದಾರೆ.
ಅಪಘಾತದಲ್ಲಿ ಕರುಣಾಸಾಗರ್ ಜತೆ ಭಾವಿ ಪತ್ನಿ ಬಿಂದು ಕೂಡ ದುರಂತ ಸಾವಿಗೀಡಾಗಿದ್ದಾರೆ. ಅಲ್ಲದ, ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂಬುವರು ಕೂಡ ಸಾವಿಗೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್)