ಜಿಲ್ಲೆ

40 ಪರ್ಸೆಂಟ್​ ಸರ್ಕಾರದ ಭ್ರಷ್ಟಾಚಾರ ಕಿರೀಟಧಾರಿ ಬೊಮ್ಮಾಯಿ ಅವರೇ ಇನ್ನೆಷ್ಟು ಅಕ್ರಮಗಳಿವೆ? ಕಾಂಗ್ರೆಸ್​ ವಾಗ್ದಾಳಿ

ಬೆಂಗಳೂರು: ಎಂಎಸ್​ಐಎಲ್​​ನಲ್ಲಿ ನಡೆದ 100 ಕೋಟಿ ಮೊತ್ತದ ಅಕ್ರಮವನ್ನು ಸಂಸ್ಥೆಯ ನಿರ್ದೇಶಕರೇ ಬಯಲಿಗೆಳೆದಿದ್ದಾರೆ. ಈ 40 ಪರ್ಸೆಂಟ್​ ಸರ್ಕಾರದ 'ಭ್ರಷ್ಟಾಚಾರ ಕಿರೀಟಧಾರಿ'ಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದಲ್ಲಿ ಇನ್ನೆಷ್ಟು ಅಕ್ರಮಗಳಿವೆ? ಎಂದು ಪ್ರಶ್ನಿಸುವ ಮೂಲಕ ರಾಜ್ಯ ಕಾಂಗ್ರೆಸ್,​ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಸರಣಿ ಕೂ ಮಾಡಿರುವ ಕಾಂಗ್ರೆಸ್​, 7,500 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳಿಗೆ ಆಧುನಿಕ ಸೌಲಭ್ಯಗಳ ವಸತಿ ಸಮುಚ್ಚಯಗಳನ್ನು ನಿರ್ಮಿಸುತ್ತೇವೆ ಎಂದು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಭರವಸೆ ಹೀಗಿತ್ತು. ಆದರೆ, ಈಗ ಇರುವ ವಸತಿ ಯೋಜನೆಯಲ್ಲೇ ಪ್ರಗತಿ ಇಲ್ಲ, ಹಣ ಬಿಡುಗಡೆ ಆಗಿಲ್ಲ ಮತ್ತು ಹಿಂದುಳಿದ ವರ್ಗಗಳ ನಿಗಮಗಳಿಗೂ ಅನುದಾನವಿಲ್ಲದಂತಾಗಿದೆ. ಮಾತು ತಪ್ಪಿದ್ದೇಕೆ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

40 ಪರ್ಸೆಂಟ್​ ಸರ್ಕಾರದ ಹಗರಣಗಳ ಕಂಠಿಹಾರಕ್ಕೆ ಮತ್ತೊಂದು ಮುತ್ತಿನ ಮಣಿ ಸೇರ್ಪಡೆಯಾಗಿದೆ. ಎಂಎಸ್​ಐಎಲ್​ನಲ್ಲಿ ನಡೆದ 100 ಕೋಟಿ ಮೊತ್ತದ ಅಕ್ರಮವನ್ನು ಸಂಸ್ಥೆಯ ನಿರ್ದೇಶಕರೇ ಬಯಲಿಗೆಳೆದಿದ್ದಾರೆ. ಸಿಎಂ ಬೊಮ್ಮಾಯಿ ಅವರೇ, ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವುದೇ ನಿಮ್ಮ ಆಡಳಿತದ ಏಕೈಕ ಅಜೆಂಡಾವೇ? ಅಥವಾ ಯಾವ ವ್ಯವಸ್ಥೆಯೂ ನಿಮ್ಮ ನಿಯಂತ್ರಣದಲ್ಲಿಲ್ಲವೇ? ಎಂದು ಕಾಂಗ್ರೆಸ್​ ಟೀಕಾ ಪ್ರಹಾರ ನಡೆಸಿದೆ.

ನೇಮಕಾತಿ ಹಗರಣಗಳು, ಪರೀಕ್ಷಾ ಅಕ್ರಮಗಳು, ಬೋರ್ ವೆಲ್ ಹಗರಣ, ಗಂಗಾಕಲ್ಯಾಣ, PSI, KPSC ಹಗರಣ, 40% ಕಮಿಷನ್ ಹಗರಣ, BDA ಹಗರಣ, ಸ್ಮಾರ್ಟ್ ಸಿಟಿ ಹಗರಣ, BBMP ಭ್ರಷ್ಟಾಚಾರ, ಮೊಟ್ಟೆ ಹಗರಣ, MSIL ಹಗರಣ ಮತ್ತು ಗೋಣಿ ಚೀಲ ಹಗರಣ ಸೇರಿದಂತೆ ಸಾಲು ಸಾಲು ಹಗರಣಗಳನ್ನು ಮಾಡಿರುವ ಈ 40 ಪರ್ಸೆಂಟ್​ ಸರ್ಕಾರದ ಭ್ರಷ್ಟಾಚಾರ ಕಿರೀಟಧಾರಿ ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದಲ್ಲಿ ಇನ್ನೆಷ್ಟು ಅಕ್ರಮಗಳಿವೆ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್​, ಬಿಜೆಪಿ ತಿರುಗೇಟನ್ನು ನೀಡಿದೆ.