ಅಮರೇಶ್​ 
ಜಿಲ್ಲೆ

ಗ್ರಾಮಕ್ಕೆ ಬಂದಿರೋ ಮೊಸಳೆ ಹಿಡಿಯದಿದ್ರೆ ಎಫ್​ಐಆರ್ ದಾಖಲಿಸುತ್ತೇನೆ: ಜಿಲ್ಲಾಧಿಕಾರಿಗೆ ವಾರ್ನಿಂಗ್​!

ಬಳ್ಳಾರಿ: ಗ್ರಾಮಕ್ಕೆ ಬಂದಿರುವ ಮೊಸಳೆಯನ್ನು ಹಿಡಿಯದಿದ್ದರೆ ಎಫ್​ಐಆರ್​ ದಾಖಲಿಸುವುದಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಜಿಲ್ಲಾಧಿಕಾರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತಾಳೂರು ನಿವಾಸಿ ಅಮರೇಶ್ ಎಂಬುವರು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಕಳೆದ ಒಂದು ವಾರದಿಂದ ಗ್ರಾಮದ ಬಳಿ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಮೊನ್ನೆ ಸಂಜೆಯಷ್ಟೇ ಗ್ರಾಮದ ಬಳಿ ಇರುವ ಭತ್ತ ಗದ್ದೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಹೀಗಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದಲ್ಲಿರುವ ಮೊಸಳೆಯನ್ನು ಹಿಡಿಯುವಂತೆ ಅಮರೇಶ್ ಈ ಹಿಂದೆ ಸಾಕಷ್ಟು ಮನವಿ ಮಾಡಿದ್ದರು. ಆದರೆ, ಯಾವುದೇ ಸ್ಪಂದನೆ ದೊರೆಯದಿದ್ದಕ್ಕೆ ಇದೀಗ ಮತ್ತೊಮ್ಮೆ ಮೆಸೇಜ್ ಮಾಡಿ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಬಳಿಕ ಜಿಲ್ಲಾಧಿಕಾರಿಗೆ ಕರೆ ಮಾಡಿರುವ ಅಮರೇಶ್​ ಮೊಸಳೆ ಹಿಡಿಯುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಕರೆ ಮಾಡಿದಾಗ ಅಮರೇಶ್​ರಿಗೆ ಜಿಲ್ಲಾಧಿಕಾರಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಜಿಲ್ಲಾಧಿಕಾರಿ ಜತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್​)