ಜಿಲ್ಲೆ

ಅಲಯನ್ಸ್ ವಿವಿಗೆ ನುಗ್ಗಿ ಗಲಾಟೆ ಮಾಡಿದ ಕೇಸ್​: ಪರಾರಿಯಾಗಿರುವ ಸ್ವರ್ಣಲತಾ ಬಗ್ಗೆ ಪೊಲೀಸರಿಗೆ ಸಿಕ್ತು ಸುಳಿವು

ಆನೇಕಲ್: ಅಲಯನ್ಸ್ ಯೂನಿವರ್ಸಿಟಿ ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾದ ಬೆನ್ನಲ್ಲೇ ನಾಪತ್ತೆಯಾಗಿರುವ ನಟಿ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ ಅವರ ಪತ್ತೆಗೆ ಆನೇಕಲ್​ ಪೊಲೀಸರು ಬಲೆ ಬೀಸಿದ್ದು, ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಮಧುಕರ್ ಅಂಗೂರ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಸ್ವರ್ಣಲತಾ ರಾಜ್ಯವನ್ನೇ ತೊರೆದು ಪಕ್ಕದ ಕೇರಳಕ್ಕೆ ಹೋಗಿ ಅಡಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸ್ವರ್ಣಲತಾ ಎಲ್ಲಿದ್ದಾರೆ ಎನ್ನುವ ಬಗ್ಗೆ ಆನೇಕಲ್​ ಪೊಲೀಸರು ಸದ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಯಾವಾಗ ಎಫ್​ಐಆರ್​ ದಾಖಲಾಗಿರುವುದು ಗೊತ್ತಾಯಿತೋ ಆ ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆ ಬಾಗಿಲು ಹಾಕಿ ಸ್ವರ್ಣಲತಾ ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ಕೋರಮಂಗಲದಲ್ಲಿರುವ ಸ್ವರ್ಣಲತಾ ನಿವಾಸಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಜಾಮೀನು ಸಿಕ್ಕ ಬಳಿಕ ವಾಪಸ್​ ಬರಲು ಸ್ವರ್ಣಲತಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಭಾವಿ ಸಚಿವರಿಂದಲೂ ಕೂಡ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಅಲಯನ್ಸ್​ ಯೂನಿವರ್ಸಿಟಿ ರಾಜಕೀಯ ರಂಪಾಟಕ್ಕೆ ಕಾರಣವಾಗುತ್ತಿದ್ದು, ಯೂನಿವರ್ಸಿಟಿಯನ್ನು ಪ್ರಭಾವಿ ಸಚಿವರ ವಶಕ್ಕೆ ಪಡೆಯಲು ಸಂಚು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸ್ವರ್ಣಲತಾ ಪರ ಹಲವಾರು ಬಾರಿ ಸಚಿವರೊಬ್ಬರು ಆನೇಕಲ್ ಪೋಲೀಸರಿಗೆ ಕರೆ ಮಾಡಿದ್ದರು ಎಂಬ ಮಾಹಿತಿ ಇದೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಸ್ವರ್ಣಲತಾ ಹೊರ ರಾಜ್ಯಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)