ಜಿಲ್ಲೆ

ಮನೆಯಲ್ಲಿ ಮದುವೆ ಇದೆ, ಇಲ್ಲಿರಲಾರೆ, ನನ್ನನ್ನು ಬಿಟ್ಟುಬಿಡಿ...

chandru

ರೋಣ: ‘ನನ್ನ ಕ್ವಾರಂಟೈನ್ ಅವಧಿ ಮುಗಿದಿದೆ, ನನಗೆ ಹೊರಗೆ ಹೋಗಲು ಬಿಡಿ, ಇಲ್ಲದಿದ್ದರೆ ಗೋಡೆ ಜಿಗಿದು ಹೊರ ಹೋಗುತ್ತೇನೆ’ ಎಂದು ವ್ಯಕ್ತಿಯೊಬ್ಬ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಘಟನೆ ಪಟ್ಟಣದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿರುವ ಕ್ವಾರಂಟೈನ್‌ನಲ್ಲಿ ಗುರುವಾರ ನಡೆದಿದೆ.

ಗುಜರಾತ್‌ನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬನನ್ನು ಮೇ 12ರಿಂದ ಪಟ್ಟಣದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹೀಗಾಗಿ ಇವರ ಕ್ವಾರಂಟೈನ್ ಅವಧಿ ಮೇ 26ಕ್ಕೆ ಮುಗಿಯುತ್ತದೆ.

ಆದರೆ ಆತ ‘ನನ್ನ ಮನೆಯಲ್ಲಿ ಮದುವೆ ಇದೆ. ನನಗೆ ಯಾವುದೇ ರೀತಿಯ ಕರೊನಾ ಸೋಂಕು ಇಲ್ಲ. ನನ್ನನ್ನು ಬಿಟ್ಟು ಬಿಡಿ, ಇಲ್ಲದಿದ್ದರೆ ಗೋಡೆ ಜಿಗಿದು ಹೋಗುತ್ತೇನೆ’ ಎಂದು ಗಲಾಟೆ ಮಾಡಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರ ಜತೆಗೂ ಆ ವ್ಯಕ್ತಿ ವಾಗ್ವಾದ ಮಾಡಿದ್ದಾನೆ. ಇದರಿಂದ ಸಿಡಿಮಿಡಿಗೊಂಡ ಪಿಎಸ್‌ಐ, ‘ನಿನ್ನ ಕ್ವಾರಂಟೈನ್ ಅವಧಿ ಮೇ 26ಕ್ಕೆ ಮುಗಿಯುತ್ತದೆ. ಅಲ್ಲಿಯವರೆಗೆ ಇಲ್ಲಿಯೇ ಇರಬೇಕು ಇಲ್ಲದಿದ್ದರೆ ನಿನ್ನ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.