ಮೂಡುಬಿದಿರೆಯ ಮಾಂಟ್ರಾಡಿಯಲ್ಲಿ ಸತ್ತ ಹೆಬ್ಬಾವಿಗೆ ಪುರೋಹಿತರು ಸಂಸ್ಕಾರ ನೆರವೇರಿಸುತ್ತಿರುವುದು. 
ಜಿಲ್ಲೆ

ಕೃಷಿಕರ ಮಿತ್ರ ಹೆಬ್ಬಾವಿಗೂ ಸರ್ಪದಂತೆ ಸಂಸ್ಕಾರ!

Avinash R

ಸಂದೀಪ್ ಕೆ. ಕೈರಂಗಳ, ಮಂಗಳೂರು
ಕರಾವಳಿಯಾದ್ಯಂತ ನಾಗರ ಹಾವಿಗೆ ಪವಿತ್ರ ಸ್ಥಾನವಿದ್ದು, ಮೃತ ಹಾವಿಗೆ ಸಂಸ್ಕಾರ, ನಂತರ ಆಶ್ಲೇಷ ಬಲಿ ನಡೆಸಿ ದೋಷಮುಕ್ತಿಗಾಗಿ ಮಾಡುವ ಕ್ರಿಯಾವಿಧಿಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಹೆಬ್ಬಾವು ಸತ್ತಾಗಲೂ ವಿಧಿವತ್ತಾಗಿ ಸಂಸ್ಕಾರ ನಡೆಸುತ್ತಿರುವುದು ಗೊತ್ತೇ?

ಆಹಾರ ಸರಪಳಿಯ ಪಾತ್ರಧಾರಿಗೆ ಗೌರವಪೂರ್ಣ ವಿದಾಯ

ಇಂಥ ಅಪರೂಪದ ಶಾಸ್ತ್ರೋಕ್ತ ಆರಾಧನೆ ಪುತ್ತೂರು, ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಸುಳ್ಯ ತಾಲೂಕುಗಳ ಕೆಲವು ಭಾಗಗಳಲ್ಲಿ, ದೂರದ ತಮಿಳುನಾಡಿನಲ್ಲೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ದೋಷ ಪರಿಹಾರಕ್ಕೆಂದು ನಡೆಯುವ ಪೂಜೆಯಾದರೂ, ಇದರ ಹಿನ್ನೆಲೆಯಲ್ಲಿ ಭತ್ತ ಬೆಳೆಯುವ ರೈತರ ಪಾಲಿನ ಮಿತ್ರನೆಂದೇ ಹೆಸರಾದ ಹೆಬ್ಬಾವಿಗೆ ಗೌರವಪೂರ್ಣ ವಿದಾಯ ಹೇಳುವ ಸಂದೇಶ ಅಡಕವಾಗಿರುವುದು ಕಂಡುಬರುತ್ತದೆ.

ಏನಿದು ಸಂಸ್ಕಾರ ವಿಧಿ?

ಕೆಲ ತಿಂಗಳ ಹಿಂದೆ ಮೂಡುಬಿದಿರೆ ಸಮೀಪದ ಮಾಂಟ್ರಾಡಿಯ ಬಳಂಜ ಎಂಬಲ್ಲಿನ ದಿನೇಶ್ ಪೂಜಾರಿ- ಅಶೋಕ್ ಪೂಜಾರಿ ಎಂಬವರ ಗದ್ದೆಯಲ್ಲಿ ಯಂತ್ರದಿಂದ ಭತ್ತದ ಪೈರು ಕಟಾವು ಮಾಡುವ ವೇಳೆ ಹೆಬ್ಬಾವು ಸಿಲುಕಿ ಸತ್ತು ಹೋಗಿತ್ತು. ಕುಟುಂಬದ ಹಿರಿಯರು ಹಾಗೂ ದೈವಜ್ಞರ ಸೂಚನೆಯಂತೆ ಹೆಬ್ಬಾವಿನ ಮೃತದೇಹವನ್ನು ಬಿಳಿಬಟ್ಟೆಯಲ್ಲಿ ಹಾಕಿ ದಫನ ಮಾಡಿ, ಮೇಲೆ ಹೂ ಇಡುವ ವಿಧಿವನ್ನು ಪಾಲಿಸಲಾಗಿತ್ತು.

13ನೇ ದಿನದಂದು ದೇವಸ್ಥಾನದ ತೀರ್ಥ ತಂದು ದಫನ ಮಾಡಿದ ಜಾಗಕ್ಕೆ, ಮನೆಗೆ ಪ್ರೋಕ್ಷಣೆ ಮಾಡಲಾಗಿತ್ತು. 48ನೇ ದಿನ ಪುರೋಹಿತರನ್ನು ಕರೆಸಿ ಆಶ್ಲೇಷ ಬಲಿಪೂಜೆಯಂತೆ ಮಂಡಲ ಬರೆದು, 9 ಪಿಂಡವಿಟ್ಟು ಬಲಿ ಅರ್ಪಿಸಲಾಗಿದೆ. ಸುಮಾರು ಮೂರು ಗಂಟೆ ವಿಧಿವತ್ತಾಗಿ ಪೂಜೆ, ಪಿಂಡ ಪ್ರದಾನ ನಡೆದು, ಹಾವನ್ನು ಹೂತ ಜಾಗಕ್ಕೆ ತೆರಳಿ ಹಾಲು, ಸೀಯಾಳ ಇತ್ಯಾದಿ ಎರೆಯುವ ಕ್ರಮ ಪೂರೈಸಲಾಗಿದೆ.

ನಾಗರಹಾವಿಗಾದರೆ ಒಂದು ಬಾರಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ನಡೆದ ಮೇಲೆ ಕುಕ್ಕೆ ಸುಬ್ರಹ್ಮಣ್ಯದಂತಹ ನಾಗಕ್ಷೇತ್ರಕ್ಕೆ ತೆರಳಿ ಆಶ್ಲೇಷ ಬಲಿಪೂಜೆ ಮಾಡಿಸಬೇಕಾಗುತ್ತದೆ. ಜತೆಗೆ ಬೆಳ್ಳಿಯ ಜಿಡೆ-ತೆತ್ತಿ(ಹೆಡೆ-ಮೊಟ್ಟೆ) ಅರ್ಪಿಸುವುದು, ತಲೆಮಾರುಗಳು ಕಳೆದರೂ ದೋಷ ಮುಂದುವರಿಯುವುದು ಮತ್ತಿತರ ನಂಬಿಕೆಗಳಿವೆ. ಆದರೆ, ಹೆಬ್ಬಾವು ಸಂಸ್ಕಾರದಲ್ಲಿ ಇಂಥ ಯಾವುದೇ ವಿಧಿಗಳಿಲ್ಲ. ಸಂಸ್ಕಾರ ಸಂದರ್ಭವೂ ಸರಳವಾಗಿ ಮಂಡಲ ಬರೆಯಲಾಗುತ್ತದೆ ಎಂದು ಪುರೋಹಿತರು ಹೇಳುತ್ತಾರೆ.

ಹೆಬ್ಬಾವನ್ನು ಕೊಲ್ಲುವಂತಿಲ್ಲ ಎಂಬ ಕಾನೂನೇ ಇದೆ. ಕೊಂದವರ ಮೇಲೆ ಜಾಮೀನು ರಹಿತ ಕೇಸು ದಾಖಲಾಗುತ್ತದೆ, ಜೈಲಿಗೂ ಹೋಗಬೇಕಾದ ಕಠಿಣ ಶಿಕ್ಷೆಯೂ ಇರುತ್ತದೆ.

ರೈತರಿಗೆ ಹೇಗೆ ಉಪಕಾರ?:

ನಾಗರಿಕ ಸಮಾಜದಲ್ಲಿ ಹಾವುಗಳ ಕುರಿತು ಜಾಗೃತಿ ಮೂಡಿಸುವ ಮೊದಲೇ ಹೆಬ್ಬಾವನ್ನು ಕೊಲ್ಲಬಾರದು ಎಂಬ ನಂಬಿಕೆ ಹಿರಿಯರಿಂದಲೇ ಬಳುವಳಿಯಾಗಿ ಬಂದಿದೆ. ಹೆಬ್ಬಾವು ನಿರುಪದ್ರವಿ, ವಿಷಕಾರಿಯಲ್ಲ. ಅದಕ್ಕೂ ಮೇಲಾಗಿ, ಅದು ಆಹಾರ ಸರಪಳಿಯ ಪ್ರಮುಖ ಕೊಂಡಿ. ಗದ್ದೆ ಬೇಸಾಯ ಮಾಡುವವರಿಗೆ ಇದರ ಮಹತ್ವ ತಿಳಿದಿರುತ್ತದೆ. ಭತ್ತ ಕಟಾವಿಗೆ ಬರುವ ಹೊತ್ತಿನಲ್ಲಿ ಇಲಿ, ಹೆಗ್ಗಣ, ಹಂದಿ ಮತ್ತಿತರ ಪ್ರಾಣಿಗಳು ಉಪಟಳ ನೀಡುತ್ತವೆ. ಇವುಗಳನ್ನು ಹೆಬ್ಬಾವು ಭಕ್ಷಿಸುವುದರಿಂದ ಪರೋಕ್ಷವಾಗಿ ರೈತನಿಗೆ ಉಪಕಾರವಾಗುತ್ತದೆ. ಇಂಥದ್ದೇ ಕಾರಣಗಳಿಂದಾಗಿ ಹೆಬ್ಬಾವು ಮನೆಯ ಅಂಗಳದಲ್ಲಿ ತೆವಳಿದರೆ ಅಥವಾ ಮನೆ ಪ್ರವೇಶಿಸಿದರೆ ಒಳಿತು, ಭತ್ತದ ಕಳಸೆಯಲ್ಲಿದ್ದರೆ ಭತ್ತ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ, ಪ್ರಾಣೋತ್ಕ್ರಮಣ ಕಾಲಕ್ಕೆ ಅದರಿಂದ ಹರಿದ ರಕ್ತದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಮನೆಯವರಿಗೆ ತೊಂದರೆಯಾಗುತ್ತದೆ ಎಂಬ ನಂಬಿಕೆಯೂ ಇದೆ.

ನಮ್ಮ ಭಾಗದಲ್ಲಿ ಹೆಬ್ಬಾವು ಆಕಸ್ಮಿಕವಾಗಿ ಸಾವಿಗೀಡಾದ ಸಂದರ್ಭಗಳಲ್ಲಿ ವಿಧಿವತ್ತಾಗಿ ಸಂಸ್ಕಾರ ನಡೆಸುವ ಕ್ರಮ ಹಿಂದಿನಿಂದಲೂ ಇದೆ. ಸಂಸ್ಕಾರ ಮಾಡದಿದ್ದರೆ ದೋಷ ಬರಬಹುದು ಎಂದು ಹಿಂದಿನ ಕೆಲವು ಉದಾಹರಣೆಗಳನ್ನೂ ಹಿರಿಯರು ನೀಡಿದ್ದರು. ನಮ್ಮ ಕುಟುಂಬಕ್ಕೆ ದೋಷ ಬಾರದಂತೆ ನಾವು ಪುರೋಹಿತರನ್ನು ಕರೆಸಿ ಸರಳವಾಗಿ ಸಂಸ್ಕಾರ ನೆರವೇರಿಸಿದ್ದೇವೆ. -ಅಶೋಕ್ ಪೂಜಾರಿ, ಮಾಂಟ್ರಾಡಿ ನಿವಾಸಿ
ಹಾವುಗಳ ಎಲ್ಲ ಆಚರಣೆಗಳು ಆರಂಭವಾಗಿರುವುದೇ ಕೃಷಿಮೂಲದಿಂದ. ಅದರಂತೆ ನಮ್ಮ ಪೂರ್ವಜರಿಗೆ ಹೆಬ್ಬಾವು ವಿಷ ರಹಿತವಾದದ್ದು ಮತ್ತು ಬೆಳೆ ಸಂರಕ್ಷಣೆ ಮಾಡುವಂಥದ್ದು ಎಂದು ತಿಳಿದಿತ್ತು. ಅದನ್ನೆಲ್ಲ ಗಮನಿಸಿಯೇ ಕೃಷಿ ಬದುಕಿನಲ್ಲಿ ಅವರು ಮಹತ್ವದ ಸ್ಥಾನ ನೀಡಿದ್ದಾರೆ. ದೋಷ ಎಂಬ ನಂಬಿಕೆಗಿಂತಲೂ ರೈತನಿಗೆ ಉಪಕಾರಿಯಾದ ಹೆಬ್ಬಾವಿಗೆ ಗೌರವಪೂರ್ಣವಾಗಿ ವಿದಾಯ ಹೇಳುವುದು ಈ ಸಂಸ್ಕಾರದ ಹಿಂದಿನ ಸಂದೇಶ ಎನ್ನುವುದು ಉತ್ತಮ. ಈ ನಂಬಿಕೆ ಉತ್ತಮವಾದರೂ, ವ್ಯವಹಾರದ ರೂಪ ಪಡೆಯದಂತೆ ಎಚ್ಚರಿಕೆಯನ್ನೂ ವಹಿಸಬೇಕಾಗಿದೆ. -ಗುರುರಾಜ್ ಸನಿಲ್, ಉರಗ ತಜ್ಞರು, ಉಡುಪಿ