| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು 2023-24ನೇ ಸಾಲಿಗೆ ಅವಶ್ಯ ಇರುವ ವಿವಿಧ ಸಾಮರ್ಥ್ಯದ 4,500 ಪರಿವರ್ತಕಗಳನ್ನು ಕೇರಳದ ಕಂಪನಿಯಿಂದ ಖರೀದಿಸಲು 4ಜಿ ವಿನಾಯ್ತಿ ನೀಡಿ ಆದೇಶ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎಸ್ಕಾಂ ಕಾಮನ್ ಎಸ್ ದರದ (2021-22) ಅನ್ವಯ ಮೊದಲ ಹಂತದಲ್ಲಿ 59.73 ಕೋಟಿ ರೂ. ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕ್ ಆಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದ
ಟ್ರಾನ್ಸ್ಫಾರ್ಮರ್ ಖರೀದಿಸಲು ಸರ್ಕಾರ ಸಮ್ಮತಿ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಇಂಧನ ಇಲಾಖೆ ದೃಢಪಡಿಸಿಕೊಳ್ಳಬೇಕೆಂದು ಆರ್ಥಿಕ ಇಲಾಖೆ ಷರತ್ತು ವಿಧಿಸಿದೆ. ಆದರೆ, ಈ ಖರೀದಿಯ ಹಿಂದೆ ಕಾಂಗ್ರೆಸ್ನ ಪ್ರಮುಖ ಹುದ್ದೆಯಲ್ಲಿರುವ ಹಿರಿಯ ನಾಯಕರೊಬ್ಬರ ಕೈವಾಡ ಇರುವ ಸಂಶಯ ವ್ಯಕ್ತವಾಗಿದ್ದು, ತನಿಖೆ ನಡೆದರೆ ಸತ್ಯಾಂಶ ಬಯಲಾಗಲಿದೆ ಎಂಬ ದನಿ ಬಿಜೆಪಿಯಿಂದ ಹೊರಟಿದೆ.
ಹಿಂದಿನ ಅಧ್ಯಕ್ಷ ಹೇಳೋದೇನು?: ಈ ಬೆಳವಣಿಗೆ ಬಗ್ಗೆ ಕವಿಕಾದ ಅಧ್ಯಕ್ಷರಾಗಿ ಅನುಭವ ಹೊಂದಿರುವ ಬಿಜೆಪಿ ಮುಖಂಡ ತಮ್ಮೇಶ್ ಗೌಡ ಹೇಳುವುದೇ ಬೇರೆ. ರಾಜ್ಯಕ್ಕೆ ಅಗತ್ಯವಾಗುವಷ್ಟು ಮತ್ತು ಅಗತ್ಯವಾದ ಶ್ರೇಣಿಯ ವಿದ್ಯುತ್ ಪರಿವರ್ತಕ ಪೂರೈಸಲು ಕವಿಕಾಗೆ ಎಲ್ಲ ಸಾಮರ್ಥ್ಯವಿದೆ. ಸರ್ಕಾರ 4ಜಿ ವಿನಾಯ್ತಿ ನೀಡಿ ಕಂಪನಿ ನಿರ್ಧರಿಸಿದ ಬೆಲೆಗೆ ಖರೀದಿಸಲು ಹೊರಟಿರುವುದು ನೋಡಿದರೆ ಇದೊಂದು ದಂಧೆ ಎನಿಸುತ್ತಿದೆ ಎಂದರು. ಪ್ರತಿವರ್ಷ ಎಸ್ಕಾಂಗಳಿಗೆ 50-55 ಸಾವಿರ ಪರಿವರ್ತಕ ಬೇಕಾಗುತ್ತದೆ. ಎಸ್ಕಾಂಗಳು ಬಯಸುವ ಎಲ್ಲ ಶ್ರೇಣಿಯ ಪರಿವರ್ತಕಗಳನ್ನು ಉತ್ಪಾದಿಸುವ ಸಾಮರ್ಥ್ಯ ಕವಿಕಾಗಿದೆ. ಎನ್ಜಿಎಫ್ ಕೂಡ ಇದೆ. ಇಷ್ಟಲ್ಲದೆ, ಖಾಸಗಿಯಾಗಿಯೂ ಲಭ್ಯವಿದೆ. ಕವಿಕಾ ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬೇರೆ ಕಂಪನಿಗಳ ಪರಿವರ್ತಕದೊಂದಿಗೆ ಹೋಲಿಕೆ ಮಾಡುವುದಕ್ಕೂ ಸಾಧ್ಯವಿಲ್ಲ. ಅಷ್ಟು ಗುಣಮಟ್ಟದ ಉತ್ಪನ್ನ ಕವಿಕಾದ್ದಾಗಿರುತ್ತದೆ ಎಂಬುದು ತಮ್ಮೇಶ್ ಗೌಡ ವಿವರಣೆ. ಕವಿಕಾದಲ್ಲಿ 25ಕೆವಿಎ ದಿಂದ 500ಕೆವಿಎ ಸಾಮರ್ಥ್ಯದ, 11ಕೆವಿ/433ವಿ ದರ್ಜೆಯ ಬಿಇಇ ಸಾಮರ್ಥ್ಯದ 4 ಮತ್ತು 5 ಸ್ಟಾರ್ ವರ್ಗದ ವಿದ್ಯುತ್ ವಿತರಣಾ ಪರಿವರ್ತಕಗಳು ಉತ್ಪಾದನೆಯಾಗಲಿದೆ. 65 ಕೆವಿ ಹಾಗೂ 25 ಕೆವಿಗೆ ಹೆಚ್ಚು ಬಳಸಲಾಗುತ್ತದೆ.
* ಕವಿಕಾ, ಎನ್ಜಿಇಎಫ್ ಬದಲು ಕೇರಳದಿಂದ ಖರೀದಿ
* 4,500 ಟ್ರಾನ್ಸ್ಫಾರ್ಮರ್ ಖರೀದಿಗೆ 4ಜಿ ವಿನಾಯ್ತಿ
* 59.73 ಕೋಟಿ ರೂ. ವೆಚ್ಚದಲ್ಲಿ ಖರೀದಿ
* ಕೇರಳ ಎಲೆಕ್ಟ್ರಿಕ್ ಆಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಗೆ ಆದೇಶ
ಆಕ್ಷೇಪ ಏಕೆ?
ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ) ಗುಣಮಟ್ಟದ ಪರಿವರ್ತಕ ತಯಾರಿಸುತ್ತಿದೆ. 1933ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಗವರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ ಎಂಬ ಹೆಸರಿನಲ್ಲಿ ಆರಂಭವಾದ ಕವಿಕಾ ದೇಶದಲ್ಲಿ ವಿದ್ಯುತ್ ವಿತರಣಾ ಪರಿವರ್ತಕಗಳ ಮೊಟ್ಟಮೊದಲ ತಯಾರಕ ಎಂಬ ಹೆಗ್ಗಳಿಕೆ ಹೊಂದಿದೆ. ಆಧುನೀಕರಣ, ತಾಂತ್ರಿಕತೆ ಮತ್ತು ತಯಾರಿಕಾ ವೈವಿಧ್ಯತೆಯನ್ನು ಅಳವಡಿಸಿಕೊಂಡು ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿದೆ. ಜತೆಗೆ ರಾಜ್ಯದಲ್ಲಿ ಎನ್ಜಿಇಎಫ್ ಕೂಡ ಪರಿವರ್ತಕ ಉತ್ಪಾದನೆಯಲ್ಲಿ ಮೈಲಿಗಲ್ಲು ಸಾಧಿಸಿದೆ. ಇವೆರಡೂ ಸಂಸ್ಥೆ ಕಡೆಗಣಿಸಿ 4ಜಿ ವಿನಾಯ್ತಿ ಕೊಟ್ಟು ವಿದ್ಯುತ್ ಪರಿವರ್ತಕವನ್ನು ಕೇರಳದಿಂದ ಖರೀದಿಸುವ ಉದ್ದೇಶವೇನು ಎಂಬುದು ಈಗ ಎದ್ದಿರುವ ಪ್ರಶ್ನೆ.
ಸರ್ಕಾರಿ ಸ್ವಾಮ್ಯದ ಕವಿಕಾ, ಎನ್ಜಿಇಎಫ್ನಲ್ಲೇ ಗುಣಮಟ್ಟದ ವಿದ್ಯುತ್ ಪರಿವರ್ತಕ ಲಭ್ಯವಿದ್ದರೂ ಕೇರಳದಿಂದ 4ಜಿ ವಿನಾಯ್ತಿಯಲ್ಲಿ ಖರೀದಿಸುತ್ತಿ ರುವುದು ಅನುಮಾನಕ್ಕೆ ಕಾರಣ. ಖರೀದಿ ಬಳಿಕ ಅವು ಗೋದಾಮುಗಳಲ್ಲೇ ಉಳಿದರೆ, ಕವಿಕಾ ಪರಿವರ್ತಕ ಮಾತ್ರ ಫೀಲ್ಡ್ನಲ್ಲಿರುತ್ತವೆ!
| ತಮ್ಮೇಶ್ ಗೌಡ ಕವಿಕಾ ಮಾಜಿ ಅಧ್ಯಕ್ಷ
ವಿನಾಯ್ತಿ ಗುಮಾನಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1993 ಕಲಂ 4(ಜಿ) ಅಡಿ ಇಂಧನ ಇಲಾಖೆಗೆ ವಿನಾಯಿತಿ ನೀಡಿರುವುದು ಗುಮಾನಿಗೆ ಕಾರಣ. ಟೆಂಡರ್ ಆಹ್ವಾನಿಸಿ ವಿದ್ಯುತ್ ಪರಿವರ್ತಕ ಖರೀದಿಸಲು ಅವಕಾಶವಿತ್ತು. ಹೊರ ರಾಜ್ಯದವರಿಗೆ ರೆಡ್ ಕಾರ್ಪೆಟ್ ಹಾಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 4ಜಿ ವಿನಾಯಿತಿ ಸಾಮಾನ್ಯ ಸಂಗತಿ. ಎಲ್ಲ ಇಲಾಖೆಗಳಲ್ಲೂ ಈ ರೀತಿ ಮಾಡಲಾಗುತ್ತದೆ, ಕಾನೂನಿನಲ್ಲೂ ಅವಕಾಶವಿದೆ. ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲು ಇದೊಂದು ದಾರಿ ಇದೆ. ಈ ಹಿಂದೆಯೂ ಕೂಡ ಬೇರೆ ಬೇರೆ ಮೂಲಗಳಿಂದ ಪರಿವರ್ತಕ ಖರೀದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.