ವಿಜಯವಾಣಿ ಸುದ್ದಿಜಾಲ ಕಡಬ
ಅಕ್ಷರ ರಥ, ಕಲಿಕಾ ಪಲ್ಲಕ್ಕಿ, ಕಲಿಕಾ ಮಂಟಪ, ಪುಸ್ತಕ ಜೋಳಿಗೆ, ಕಲಿಕಾ ಚೀಲ ಹಂಚೋಣ, ಕಲಿಕಾ ಹುಂಡಿ ಹೀಗೆ ಪ್ರತಿವರ್ಷ ವಿಶಿಷ್ಟವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಿಕೊಳ್ಳುತ್ತಿರುವ ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಪ್ಲಾಸ್ಟಿಕ್‌ಮುಕ್ತ ಸ್ವಚ್ಛ ಭೂಮಿ ಆಶಯದಲ್ಲಿ, ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಚೀಲ ಹಂಚಿ ಪ್ರಾರಂಭೋತ್ಸವ ಆಚರಿಸಲಾಯಿತು.
ಹಳೇ ವಿದ್ಯಾರ್ಥಿ, ದಾನಿ ಸುರೇಶ್ ರೈ ಸೂಡಿಮುಳ್ಳು ನೀಡಿದ ಮೇಜುಗಳು ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳು ನೀಡಿದ ಕೊಡುಗೆಗಳ ಹಸ್ತಾಂತರ, ದಾನಿಗಳು ನೀಡಿದ ಪುಸ್ತಕಗಳು, ಲೇಖನ ಸಾಮಗ್ರಿಗಳ ಹಂಚಿಕೆ ನಡೆಯಿತು. ಶಾಲಾ ಆವರಣದಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ತ್ಯಾಜ್ಯ ನಿರ್ವಹಣೆ ವಿಶೇಷ ಚೀಲ ನೀಡಿ ಕೊಡುಗೆಗಳ ಶಾಲಾರ್ಪಣೆ ಮೂಲಕ ಶಾಲಾ ಆರಂಭೋತ್ಸವ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಉದ್ಘಾಟನೆ, ಸಭಾ ಕಾರ್ಯಕ್ರಮ
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಡಿ ಕೃಷ್ಣ ಕುಮಾರ್ ರೈ ದೇವಸ್ಯ, ಸವಣೂರು ಗ್ರಾಪಂ ಕಾರ್ಯದರ್ಶಿ ಮನ್ಮಥ ಅಬೀರ, ಎಸ್‌ಡಿಎಂಸಿ ಉಪಾಧ್ಯಕ್ಷ ರಾಧಾಕೃಷ್ಣ ದೇವಸ್ಯ ಸಭಾ ಕಾರ್ಯಕ್ರಮದಲ್ಲಿದ್ದರು. ಎಲ್ಲ ಮಕ್ಕಳಿಗೂ ದಾನಿಗಳಾದ ಸುಹಾಸ್ ಕಾರಂತ್, ಉಲ್ಲಾಸ್ ಕಾರಂತ್, ಕೃಷ್ಣ ಕುಮಾರ್ ರೈ ದೇವಸ್ಯ, ಹರೀಶ ಪಿ., ಭರತ್ ಓಡಂತರ್ಯ, ಶಾಲಾ ಶಿಕ್ಷಕರು ನೀಡಿದ ಲೇಖನ ಸಾಮಗ್ರಿ ನೀಡಲಾಯಿತು. ಸರ್ಕಾರದಿಂದ ನೀಡಿದ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.
ಸವಣೂರು ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಬಾಬು ಜರಿನಾರು, ಗಿರಿಶಂಕರ ಸುಲಾಯ, ಕಡಬ ಠಾಣಾ ಹೆಡ್‌ಕಾನ್‌ಸ್ಟೆಬಲ್ ಹರೀಶ ಪಿ, ಲಿಂಗಪ್ಪ ರೈ ಚೆಂಬುತ್ತೋಡಿ, ಪಂಚಾಯಿತಿ ಸಿಬ್ಬಂದಿ ಪ್ರಮೋದ್ ರೈ, ದಯಾನಂದ, ಯತೀಶ್ ಕೆ. ಎಂ.ಇದ್ದರು. ಶಿಕ್ಷಕರಾದ ಶೋಭಾ ಕೆ. ಸ್ವಾಗತಿಸಿ, ಚಂದ್ರಿಕಾ ಎಸ್. ವಂದಿಸಿ, ಮುಖ್ಯಶಿಕ್ಷಕಿ ರಶ್ಮಿತಾ ನರಿಮೊಗರು ನಿರ್ವಹಿಸಿದರು.
ಪ್ರಕೃತಿಯ ಉಳಿವಿನ ಅರಿವಿನ ಹಂಚಿಕೆ ಪರಿಕಲ್ಪನೆಯೇ ಸ್ವಚ್ಛ ಕಲಿಕಾರಂಭ. ಪ್ರತಿ ಮಗು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಾರಕ್ಕೊಮ್ಮೆ ಶಾಲೆಗೆ ನೀಡಬೇಕಿದ್ದು, ಗ್ರಾಪಂ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸಲಾಗುತ್ತದೆ. ಹೆಚ್ಚು ತೊಡಗಿಸಿಕೊಳ್ಳುವ ಮಗುವಿಗೆ ಬಹುಮಾನವಿದೆ. ಗಾಂಧಿ ಗ್ರಾಮ ಪುರಸ್ಕಾರ ಪುರಸ್ಕೃತ ಸವಣೂರು ಗ್ರಾಪಂ ಸಹಕಾರದೊಂದಿಗೆ ಈ ಕಾರ್ಯಕ್ರಮ ಸಂಘಟಿಸಲಾಗಿದೆ.