ಜಿಲ್ಲೆ

ಸಿ ಆ್ಯಂಡ್ ಆರ್ ನಿಯಮಾವಳಿ ತಿದ್ದುಪಡಿ ಕರಡು ಪ್ರಕಟಿಸಿ: ಮಹಾನಗರ ಪಾಲಿಕೆ ನೌಕರರ ಸಂಘ ಒತ್ತಾಯ

ಹರೀಶ್​​ ಕೆ.ಸಿ.

ಬೆಂಗಳೂರು: ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ( ಸಿ ಆ್ಯಂಡ್ ಆರ್) ನಿಯಮಾವಳಿ ತಿದ್ದುಪಡಿ ಕರಡನ್ನು 30 ದಿನದೊಳಗೆ ಪ್ರಕಟಿಸದಿದ್ದರೆ ರಾಜ್ಯಾದ್ಯಂತ ಮಹಾನಗರ ಪಾಲಿಕೆಯ ಎಲ್ಲ ಕಾರ್ಯವನ್ನು ಸ್ಥಗಿತಗೊಳಿಸಿ ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಎಚ್ಚರಿಕೆ ನೀಡಿದೆ.

ಸಮಸ್ಯೆ ಬಗೆಹರಿಸುವಂತೆ ಕೋರಿ ಹಲವು ಬಾರಿ ನಗರಾಭಿವೃದ್ಧಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದರೂ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿಲ್ಲ. ಮುಂದಿನ ಒಂದು ತಿಂಗಳೊಳಗೆ ನಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಮಹಾನಗರ ಪಾಲಿಕೆಯ ದೈನಂದಿನ ಕೆಲಸಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಹೇಳಿದ್ದಾರೆ.

2011ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಅಂತಿಮಗೊಳಿಸಲಾಗಿದೆ. ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ನಿಯಮಾವಳಿ ರಚಿಸುವ, ಪುನರಾವಲೋಕಿಸುವ ವೇಳೆ ಅನುಸರಿಸಬೇಕಾದ ಸಾಮಾನ್ಯ ತತ್ವ ಮತ್ತು ಮಾರ್ಗಸೂಚಿ ಪಾಲಿಸಲು ಸರ್ಕಾರ ಆದೇಶಿಸಿದೆ. ಆದರೆ, 13 ವರ್ಷವಾದರೂ ವೃಂದ ಮತ್ತು ನೇಮಕಾತಿ ನಿಯಮಾವಳಿ ಅಂತಿಮಗೊಳಿಸಿಲ್ಲ. ಇದರಿಂದಾಗಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮುಂಬಡ್ತಿಯಿಂದ ವಂಚಿತರಾಗಿದ್ದಾರೆ. ಎರವಲು ಸೇವೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪರಿಣಾಮ ಕಾಯಂ ಅಧಿಕಾರಿಗಳು ಮತ್ತು ನೌಕರರು ಆಡಳಿತ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.