ಜಿಲ್ಲೆ

ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ; ಸರ್ಕಾರದ ವಿರುದ್ಧ ರೇಣುಕಾಚಾರ್ಯ ಜನಜಾಗೃತಿ

ಹೊನ್ನಾಳಿ: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದೆ ಮೋಸ ಮಾಡಲಾಗುತ್ತಿದೆ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಳ್ಳಿ ಹಳ್ಳಿಗೆ ತೆರಳಿ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ.

ತಾಲೂಕಿನ ಚಿಕ್ಕೇರಹಳ್ಳಿ, ದೊಡ್ಡೇರಹಳ್ಳಿ ಸೇರಿ ಇತರ ಗ್ರಾಮಗಳಗೆ ಸೋಮವಾರ ಭೇಟಿ ನೀಡಿದ್ದ ರೇಣುಕಾಚಾರ್ಯ, ಹೊನ್ನಾಳಿ- ನ್ಯಾಮತಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ತೆರಳಿ ಈ ಕುರಿತು ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಅವಳಿ ತಾಲೂಕಿನ ಜನರಾರೂ ವಿದ್ಯುತ್ ಬಿಲ್ ಪಾವತಿಸಬೇಡಿ. ಯಾರಾದರೂ ಬಿಲ್ ಕೇಳಿದರೆ ನನಗೆ ಕರೆ ಮಾಡಿ ಎಂದರು. ಉಚಿತ ಭರವಸೆ ಈಡೇರಿಸುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಘೋಷಿತ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಬದಲು ಈಗ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ಷರತ್ತುಗಳು ಅನ್ವಯ ಎಂದು ವರಸೆ ಬದಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರದ ನಡೆ ಗಮನಿಸಿದರೆ ಇವುಗಳ ಜಾರಿ ಅನುಮಾನ ಎನಿಸುತ್ತದೆ ಎಂದರು.

ಅಧಿಕಾರಕ್ಕೆ ಬಂದ ಬಳಿಕ ಮತದಾರರನ್ನು ಅವಮಾನಿಸಿದರೆ ಅವರು ಕ್ಷಮಿಸುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಜನರನ್ನು ಸಂಘಟಿಸಿ ಹೋರಾಟಕ್ಕಿಳಿಯುವೆ ಎಂದು ತಿಳಿಸಿದರು.