ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಇಬ್ಬರು ಕಾನ್ಸ್ಟೇಬಲ್ ಸೇರಿ ಮತ್ತೆ ನಾಲ್ವರು ಸಿಐಡಿ ಅಧಿಕಾರಿಗಳ ಬಲೆಗೆ ಸಿಲುಕಿದ್ದಾರೆ. ಕಲಾಸಿಪಾಳ್ಯ ಠಾಣೆ ಕಾನ್ಸ್ಟೇಬಲ್ ಎಚ್.ಬಿ. ಹರೀಶ್, ನೆಲಮಂಗಲ ಠಾಣೆ ಕಾನ್ಸ್ಟೇಬಲ್ ಎಚ್.ಜಿ. ಮೋಹನ್ ಕುಮಾರ್ ಮತ್ತು ರಾಮನಗರದ ದರ್ಶನ್ ಗೌಡ ಮತ್ತು ಎನ್.ದಿಲೀಪ್ ಕುಮಾರ್ ಬಂಧಿತರು. ಮತ್ತಷ್ಟು ಅಭ್ಯರ್ಥಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುವುದಾಗಿ ಸಿಐಡಿ ಸುಳಿವು ನೀಡಿದೆ.
ಎಸ್ಐ ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ನಗರ ಚೌಕ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ಕೈಗೊಂಡಿತ್ತು. ಇದಾದ ಮೇಲೆ ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಿಗೆ ನೋಟಿಸ್ ಕೊಟ್ಟು ಕಾರ್ಬನ್ ಒಎಂಆರ್ ಶೀಟ್ ಮತ್ತು ಪ್ರವೇಶ ಪತ್ರದೊಂದಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು. 172 ಅಭ್ಯರ್ಥಿಗಳ ಪೈಕಿ ನಾಲ್ವರು ಹೊರತುಪಡಿಸಿ ಉಳಿದವರು ಹಾಲ್ ಟಿಕೆಟ್ ಮತ್ತು ಕಾರ್ಬನ್ ಶೀಟ್ ಹಾಜರುಪಡಿಸಿ ವಿಚಾರಣೆ ಎದುರಿಸಿದ್ದರು. ಪಂಚನಾಮೆ ಮಾಡಿ ಅಸಲಿ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ಗಳನ್ನು ಎಫ್ಎಸ್ಎಲ್ಗೆ ರವಾನಿಸಿ ತಾಳೆ ಮಾಡಿ ತಿದ್ದಿರುವ ಕುರಿತು ವರದಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ವೇಳೆ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ಗೂ ವ್ಯತ್ಯಾಸ ಇರುವುದಾಗಿ ತಿಳಿದುಬಂದಿತ್ತು. ಇದರ ಆಧಾರದ ಮೇಲೆ ಆರೋಪಿಗಳಿಗೆ ನೋಟಿಸ್ ಕೊಟ್ಟು ಭಾನುವಾರ ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ವೇಳೆ ಸಮಂಜಸ ಉತ್ತರ ನೀಡದ ಕಾರಣ ನಾಲ್ವರನ್ನು ಬಂಧಿಸಲಾಗಿದೆ.
ಯಲಹಂಕ ನ್ಯೂಟೌನ್, ಕೋರಮಂಗಲ ಮತ್ತು ರಾಮಮೂರ್ತಿನಗರ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ಆಯಾ ಠಾಣಾ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಮತ್ತೊಂದೆಡೆ ಡಿಜಿ-ಐಜಿಪಿ ಪ್ರವೀಣ್ ಸೂದ್, ಮೂರು ಪ್ರಕರಣಗಳನ್ನು ಸಿಐಡಿಗೆ ವಹಿಸಿ ಆದೇಶಿಸಿದ್ದಾರೆ.
ಕಾಂಗ್ರೆಸ್ನವರಿಗೆ ಒನ್(ನಾಚಿಕೆ), ಟು(ಮಾನ), ತ್ರಿ(ಮರ್ಯಾದೆ) ಇಲ್ಲ. 1, 2, 3 ಇದ್ದರೆ ಈ ರೀತಿ ಆರೋಪ ಮಾಡುತ್ತಿರಲಿಲ್ಲ. ಕಲ್ಪನೆ ಮಾಡಿಕೊಂಡು, ನಿರಾಧಾರವಾಗಿ ಆಪಾದನೆ ಮಾಡುತ್ತಿದ್ದಾರೆ. ಪಿಎಸ್ಐ ಅಭ್ಯರ್ಥಿ ದರ್ಶನ್ಗೌಡ ಬಂಧನ ಆಗದಿದ್ದಾಗ ಬಿಟ್ಬಿಟ್ರು ಅಂದರು. ಬಂಧನ ಆದಾಗ ಮತ್ತೊಂದು ಸಂಬಂಧ ಹೇಳುತ್ತಾರೆ. ಬಂಧನದಿಂದ ಆಚೆ ಬಿಟ್ಟಾಗ ಇನ್ನೊಂದು ಹೇಳುತ್ತಾರೆ. ವಿಶ್ವದಲ್ಲಿರುವ ಒಕ್ಕಲಿಗರೆಲ್ಲ ನನ್ನ ಸಂಬಂಧಿಕರೇ. ನಾನು ಸಂಬಂಧ ಇಲ್ಲ ಅಂತ ಹೇಳಲು ಆಗಲ್ಲ. | ಡಾ.ಸಿ.ಎನ್. ಅಶ್ವತ್ಥನಾರಾಯಣ ಸಚಿವ ಪಿಎಸ್ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರ ಸಹೋದರ ಜತೆ ಡೀಲ್ ಕುದುರಿಸಿದ್ದ ಅಭ್ಯರ್ಥಿ ದರ್ಶನಗೌಡ ಬಂಧನವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ತರಲು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಸಿಐಡಿಯವರು ನಿಷ್ಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ತಿದ್ದಿರುವ ಕೈ ಯಾವುದು?: ವಾಮಮಾರ್ಗದಲ್ಲಿ ಇಲಾಖೆಗೆ ಸೇರುವ ಕಾರಣ ಏಜೆಂಟ್ಗಳೊಂದಿಗೆ ಒಳ ಸಂಚು ರೂಪಿಸಿ ಲಿಖಿತ ಪರೀಕ್ಷೆಯಲ್ಲಿ ಒಎಂಆರ್ ಶೀಟ್ಗಳಲ್ಲಿ ಗೊತ್ತಿರುವ ಉತ್ತರ ಮಾತ್ರ ತುಂಬಿ ಉಳಿದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬಂದಿದ್ದರು. ಏಜೆಂಟ್ಗಳು ಒಎಂಆರ್ ಶೀಟ್ ತಿದ್ದುವ ಮೂಲಕ ಸರಿ ಉತ್ತರ ಬರೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಒಎಂಆರ್ ಶೀಟ್ ತಿದ್ದಿರುವ ಆ ಕಾಣದ ಕೈಗಳು ಯಾವುದೆಂಬುದು ಸಾರ್ವಜನಿಕರ ಪ್ರಶ್ನೆ.
ಲಂಚ ಕೊಟ್ಟು ರ್ಯಾಂಕ್: ಎಚ್.ಬಿ.ಹರೀಶ್, ತಾತ್ಕಾಲಿಕ ಆಯ್ಕೆಪಟ್ಟಿ ಯಲ್ಲಿ ಇನ್ಸರ್ವಿಸ್ ವಿಭಾಗದಲ್ಲಿ 2ನೇ ರ್ಯಾಂಕ್ ಪಡೆದಿದ್ದ. ಪತ್ರಿಕೆ-1ರಲ್ಲಿ 50 ಅಂಕಗಳಲ್ಲಿ 27 ಮತ್ತು ಪತ್ರಿಕೆ-2ರಲ್ಲಿ 150ಕ್ಕೆ 122 ಅಂಕ ಪಡೆದಿದ್ದರು. ಮೋಹನ್ಕುಮಾರ್, ಪತ್ರಿಕೆ-1ರಲ್ಲಿ 24 ಮತ್ತು ಪತ್ರಿಕೆ-2ರಲ್ಲಿ 122 ಅಂಕಪಡೆದು 4ನೇ ರ್ಯಾಂಕ್ ಪಡೆದಿದ್ದ. ವಿ. ದರ್ಶನ್ಗೌಡ, 5ನೇ ರ್ಯಾಂಕ್ ಪಡೆದುಕೊಂಡಿದ್ದ. ಪತ್ರಿಕೆ-1ರಲ್ಲಿ 4 ಅಂಕ ಪಡೆದರೇ ಪತ್ರಿಕೆ-2ರಲ್ಲಿ 141 ಅಂಕ ಪಡೆದು ಅಚ್ಚರಿ ಮೂಡಿಸಿದ್ದರು. ಇನ್ನೂ 13ನೇ ರ್ಯಾಂಕ್ ಪಡೆದಿರುವ ದಿಲೀಪ್ಕುಮಾರ್ಗೆ ಪತ್ರಿಕೆ-1ರಲ್ಲಿ 27.5 ಅಂಕ ಮತ್ತು ಪತ್ರಿಕೆ-2ರಲ್ಲಿ 129.75 ಅಂಕಗಳು ಬಂದಿವೆ.
ಇನ್ಸರ್ವಿಸ್ಗಳೇ ಡೀಲ್ನಲ್ಲಿ ಫಸ್ಟ್: ಕಾನ್ಸ್ಟೇಬಲ್ಗಳೇ ಹೆಚ್ಚಾಗಿ ಡೀಲ್ ಕುದುರಿಸಿ ಭುಜದ ಮೇಲೆ ಡಬಲ್ ಸ್ಟಾರ್ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕಲಾಸಿಪಾಳ್ಯ ಪೇದೆ ಹರೀಶ್ಕುಮಾರ್, ಇಬ್ಬರು ಏಜೆಂಟ್ಗಳನ್ನು ಸಂಪರ್ಕ ಮಾಡಿ 50 ಲಕ್ಷ ರೂ.ಗೆ ಡೀಲ್ ಮುಗಿಸಿ 30 ಲಕ್ಷ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಏಜೆಂಟ್ಗಳು ಯಾರೆಂಬುದರ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.