ಜಿಲ್ಲೆ

ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಲಭ್ಯ ಕಲ್ಪಿಸಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪಟ್ಟಣಕ್ಕೆ ಹೋಗಲು ಇಂದಿಗೂ ಅನೇಕ ಕಡೆ ಬಸ್ ಸೌಕರ್ಯವಿಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಆಗ್ರಹಿಸಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ರಮೇಶ್ ತಿಂಗಳಾಯ, ಸತೀಶ್ ಆಚಾರ್ಯ, ಗೋಪಿ ನಾಯ್ಕ, ಶ್ರೀನಿವಾಸ ವಡ್ಡರ್ಸೆ, ರೇಖಾ ಸುವರ್ಣ ಮತ್ತಿತರರು ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿದರು.

ವಾಬುಕಳ, ಹಂಗಾರಕಟ್ಟೆ, ಕೊಕ್ಕರ್ಣೆ, ಕುಂದಾಪುರ ಸೇರಿದಂತೆ ಬಸ್ ಸೌಕರ್ಯ ಅನಿವಾರ್ಯವಾಗಿರುವ ಪ್ರದೇಶಗಳ ಬಗ್ಗೆ ತುರ್ತು ಕ್ರಮಕ್ಕಾಗಿ ನಿರ್ಣಯದೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಹೇಳಿದರು.

ಸಮಿತಿ ಸದಸ್ಯ ಸುರೇಶ ಪೂಜಾರಿ ವಾತನಾಡಿ ಅಂತ್ಯೋದಯ ಪಡಿತರ ಕಾರ್ಡ್ ಕಾರಣ ಹೇಳಿ ಸಾಲ ಸೌಲಭ್ಯಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದರಿಂದ ಸಾಲ ಸೌಲಭ್ಯಕ್ಕೆ ಯಾವುದೇ ತೊಂದರೆ ಇಲ್ಲ ಹಾಗೂ ಇಲಾಖೆ ಸಂಪರ್ಕಿಸಿದರೆ ಅಂತ್ಯೋದಯ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಮಿತಿ ಡಾ.ಸುನೀತಾ ಶೆಟ್ಟಿ ವಾತನಾಡಿ ಕೊಕ್ಕರ್ಣೆ ಭಾಗದ ಕುದಿ ಪ್ರದೇಶದಲ್ಲಿ ಪಡಿತರ ಅಂಗಡಿ ತೆರೆಯಲು ಈಗಾಗಲೇ ಚರ್ಚಿಸಲಾಗಿದ್ದು, ಕೂಡಲೇ ನಿರ್ಣಯದೊಂದಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ತಾಂತ್ರಿಕ ಕಾರಣಗಳಿಂದಾಗಿ ಗೃಹಲಕ್ಷ್ಮಿ ವಂಚಿತ ಫಲಾನುಭವಿಗಳಿಗೆ ಆದ್ಯತೆ ನೀಡಿ ಮಂಜೂರಾತಿಗೆ ಕ್ರಮ ವಹಿಸುವಂತೆ ಮತ್ತು ಯುವನಿಧಿ ಕುರಿತು ಇನ್ನಷ್ಟು ಪ್ರಚಾರ ಒದಗಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ, ಸಹಾಯಕ ನಿರ್ದೇಶಕ ಮಹೇಶ್ ಕೆ., ಲೆಕ್ಕಾಧಿಕಾರಿ ಮೆಲ್ವಿನ್, ದಿವ್ಯಾ, ಗೋಪಾಲ್, ಅನುಷ್ಠಾನ ಸಮಿತಿ ಸದಸ್ಯರು ಮತ್ತು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.