ಕುಷ್ಟಗಿಯಿಂದ ತಳಕಲ್‌ವರೆಗಿನ ಎಲ್ಲ ರೈಲು ನಿಲ್ದಾಣಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು. ಸಮಿತಿ ಸಂಚಾಲಕ ರವಿ ಜಕ್ಕಾ, ಸಹ ಸಂಚಾಲಕ ಮಂಜುನಾಥ ನಾಡಗೌಡ್ರ, ಪ್ರಮುಖರಾದ ಅಂದಪ್ಪ ಜವಳಿ, ರಷೀದ್ ಹಣಜಗಿರಿ ಇತರರಿದ್ದರು. 
ಜಿಲ್ಲೆ

ರೈಲು ನಿಲ್ದಾಣಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ

ಗಾಯತ್ರಿ ಮಾಲಿಪಾಟೀಲ್

ಕುಕನೂರು: ಕುಷ್ಟಗಿಯಿಂದ ತಳಕಲ್‌ವರೆಗಿನ ಎಲ್ಲ ರೈಲು ನಿಲ್ದಾಣಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹೊಸಪೇಟೆ ಆಗಮಿಸಿದ್ದ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪಟ್ಟಣದ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಮುಳ್ಳು ಗಿಡಗಳು ಬೆಳೆದಿದ್ದು, ರಾತ್ರಿ ಆಗಮಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮುಳ್ಳು ಗಿಡಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವುದು, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ನಿಲ್ದಾಣದ ಮುಖ್ಯ ರಸ್ತೆವರೆಗೆ ಬೀದಿ ದೀಪ ಅಳಡಿಕೆ, ಸ್ವಚ್ಛತೆಗಾಗಿ ಸಫಾಯಿ ಕರ್ಮಚಾರಿಗಳ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.

ಕುಕನೂರು ರೈಲು ನಿಲ್ದಾಣ ಹಾಗೂ ರೈಲ್ವೆ ಇಲಾಖೆ ನಿವೇಶನಗಳ ಸ್ಥಳದಲ್ಲಿ ಈ ಹಿಂದೆ ಎಸ್ಸಿ-ಎಸ್ಟಿ ಸಮುದಾಯದ ಸ್ಮಶಾನ ಇತ್ತು. ಸದರಿ ಕಾಮಗಾರಿಗಾಗಿ ಸ್ಮಶಾನವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಶವಸಂಸ್ಕಾರಕ್ಕೆ ಕಷ್ಟವಾಗಿದೆ. ಅಲ್ಲದೇ ಶವಗಳನ್ನು ಸುಡುವಾಗ ಬರುವ ಹೊಗೆಯಿಂದ ಪ್ರಯಾಣಿಕರಿಗೆ ಹಾಗೂ ರೈಲ್ವೆ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನಿಲ್ದಾಣದ ಎದುರು 4ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಸ್ಮಶಾನಕ್ಕೆ ಬೇರೆ ಸ್ಥಳ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚಿನ ರೈಲು ಓಡಾಟದಿಂದ ಸಾರ್ವಜನಿಕರಿಗೆ ಅನೂಲವಾಗಲಿದೆ. ಬೆಂಗಳೂರು-ಹೊಸಪೇಟೆ ರೈಲನ್ನು ಕೊಪ್ಪಳ-ತಳಕಲ್ ಮಾರ್ಗವಾಗಿ ಕುಷ್ಟಗಿ ವರೆಗೆ ವಿಸ್ತರಿಸಬೇಕು. ಹರಿಹರ-ಹೊಸಪೇಟೆ ಮಧ್ಯೆ ಸಂಚರಿಸುವ ರೈಲನ್ನು ಕುಷ್ಟಗಿವರೆಗೆ ವಿಸ್ತರಿಸಬೇಕು. ಬೆಳಗ್ಗೆ 8ಕ್ಕೆ ಹುಬ್ಬಳ್ಳಿಯಿಂದ ಕುಷ್ಟಗಿಗೆ ಹಾಗೂ ಸಂಜೆ 5ಕ್ಕೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ಹೊಸ ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಚಾಲಕ ರವಿ ಜಕ್ಕಾ, ಸಹ ಸಂಚಾಲಕ ಮಂಜುನಾಥ ನಾಡಗೌಡ್ರ, ಪ್ರಮುಖರಾದ ಅಂದಪ್ಪ ಜವಳಿ, ರಷೀದ್ ಹಣಜಗಿರಿ, ವಿನಾಯಕ ಯಾಳಗಿ, ಕಳಕೇಶ ಅತ್ತಿಕಟಗಿ ಇತರರಿದ್ದರು.