ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.  
ಜಿಲ್ಲೆ

ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

Karthika K.S

ಕುಂದಾಪುರ: ಕುಂದಾಪುರ ಕೋಡಿ ಪರಿಸರದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಡಿ ಪರಿಸರದಲ್ಲಿ ನದಿಗಳಿಂದ ಉಪ್ಪು ನೀರು ಉಕ್ಕಿ ಕೃಷಿ ಜಮೀನು ಮತ್ತು ಮನೆಗಳಿಗೆ ನುಗ್ಗಿ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನ ನಿತ್ಯ ಸಮಸ್ಯೆಗೆ ಒಳಗಾಗಿದ್ದು ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ತರು ಶಾಸಕರಲ್ಲಿ ಆಗ್ರಹಿಸಿದರು.

ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಈ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಈಗಾಗಲೇ ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡಲು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ ಅವರಿಗೆ ಮನವಿ ಮಾಡಿದ್ದೇನೆ. ಭರವಸೆ ನೀಡಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸಲು ನಾವೆಲ್ಲ ಬದ್ಧ. ಕೂಡಲೇ ತುರ್ತು ಪರಿಹಾರದ ಬಗ್ಗೆ ಚರ್ಚೆ ಮಾಡಿ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮತಿ ಅಧ್ಯಕ್ಷ ಪ್ರಭಾಕರ, ತಹಸೀಲ್ದಾರ್ ಮಲ್ಲಿಕಾರ್ಜುನ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಅರುಣ್ ಭಂಡಾರಿ, ಪುರಸಭಾ ಸದಸ್ಯರಾದ ಕಮಲ ಮಂಜುನಾಥ, ಅಶ್ಫಕ್, ದೇವಕಿ ಸಣ್ಣಯ್ಯ, ಶ್ವೇತಾ ಸಂತೋಷ್, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ, ಸ್ಥಳೀಯ ಪ್ರಮುಖರಾದ ಅಶೋಕ್ ಪೂಜಾರಿ ಕೋಡಿ, ಗೋಪಾಲ ಪೂಜಾರಿ, ಗಂಗಾಧರ ಪೂಜಾರಿ, ಶಂಕರ ಪೂಜಾರಿ, ಸುಬ್ರಹ್ಮಣ್ಯ ಪೂಜಾರಿ ಮೊದಲಾದರು ಉಪಸ್ಥಿತರಿದ್ದರು.

ಮಾತಿನ ಚಕಮಕಿ

ಉಪ್ಪು ನೀರು ನುಗ್ಗಿದ ಪ್ರದೇಶಗಳ ವೀಕ್ಷಣೆ ಸಂದರ್ಭ ಸ್ಥಳೀಯ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನೆಡೆಯಿತು. ಕೆಲಹೊತ್ತು ಇದೇ ವಿಚಾರವಾಗಿ ವಾಗ್ವಾದ ನಡೆಯತು. ಸಮಸ್ಯೆ ವಿಚಾರವಾಗಿ ಗಂಭೀರ ಸ್ವರೂಪ ಪಡೆಯಿತು. ಶಾಸಕರ ಸಮ್ಮುಖದಲ್ಲಿ ಸ್ಥಳೀಯ ಮಹಿಳೆಯರು ಸಮಸ್ಯೆ ತೆರೆದಿಟ್ಟರು. ಪ್ರತಿ ವರ್ಷವೂ ಸಮಸ್ಯೆ ಅನುಭವಿಸುತ್ತಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.