ಕುಂದಾಪುರ: ಮೊವಾಡಿ ಮಾರ್ಗವಾಗಿ ನಾಡ, ಬಡಾಕೆರೆ, ಕೋಣ್ಕಿಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್‌ಗೆ ಖಾಸಗಿ ಬಸ್ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಮಾಲೀಕರ ಸರ್ವಾಧಿಕಾರಿ ಧೋರಣೆಯನ್ನು ಬಿಂಬಿಸುತ್ತದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರ ಮತ್ತೆ ಆರಂಭಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ, ಮೊವಾಡಿ ಫ್ರೆಂಡ್ಸ್, ಜನವಾದಿ ಮಹಿಳಾ ಸಂಘಟನೆ ನಾಡ ವಲಯ, ಕಟ್ಟಡ, ಇತರ ನಿರ್ಮಾಣ ಕಾರ್ಮಿಕರ ಸಂಘ ನಾಡ, ಮೊವಾಡಿ ವಲಯ, ಮೊವಾಡಿ ಫ್ರೆಂಡ್ಸ್ ನೇತೃತ್ವದಲ್ಲಿ ನಾಡ ಗ್ರಾಪಂ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಸ್ ಸಂಚಾರ ಸಂಚಾರ ಸ್ಥಗಿತಗೊಳಿಸಿ 20 ದಿನಗಳಾಗಿವೆ. ಆದರೆ ಯಾವೊಬ್ಬ ಜನಪ್ರತಿನಿಧಿ ಈ ಬಗ್ಗೆ ಧ್ವನಿಯೆತ್ತಿಲ್ಲ. ಹೋರಾಟದ ಫಲವಾಗಿ ಬಂದ ಸರ್ಕಾರಿ ಬಸ್ ನಿಲ್ಲಿಸಿರುವುದು ಅನ್ಯಾಯ. ಇದರ ವಿರುದ್ಧ ಬೀದಿಗಿಳಿದು, ಕಾನೂನು ಮೂಲಕ ನಿರಂತರ ಹೋರಾಟ ನಡೆಯಲಿದೆ ಎಂದರು.
ಡಿವೈಎಫ್‌ಐ ಮುಖಂಡ ರಾಜೀವ ಪಡುಕೋಣೆ ಮಾತನಾಡಿ, ಈ ಬಸ್ ಸಂಚಾರದಿಂದ ಈ ಭಾಗದ ಹತ್ತಾರು ಊರಿಗೆ ಪ್ರಯೋಜನವಾಗುತ್ತಿತ್ತು. ಬಸ್‌ಗಾಗಿ ಹೈಕೋರ್ಟ್‌ಗೂ ಹೋಗುತ್ತೇವೆ. ಬೈಂದೂರು ಕ್ಷೇತ್ರದಲ್ಲಿ ಮಾತ್ರ ಹೀಗೆ ಸರ್ಕಾರಿ ಬಸ್‌ಗಳಿಗೆ ತಡ ತರುವ ಪ್ರಯತ್ನ ಆಗುತ್ತಿದೆ ಎಂದರು.
ಡಿವೈಎಫ್‌ಐ ಮುಖಂಡ ಫಿಲಿಪ್ ಡಿಸಿಲ್ವಾ, ಹೆಂಚು ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ಜನವಾದಿ ಮಹಿಳಾ ಸಂಘಟನೆ ನಾಗರತ್ನ ನಾಡ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮನೋರಮಾ ಭಂಡಾರಿ, ಪಲ್ಲವಿ, ಮೊವಾಡಿ ಫ್ರೆಂಡ್ಸ್‌ನ ಶಿವಾನಂದ, ರಾಘವೇಂದ್ರ, ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷೆ ಗುಲಾಬಿ, ನಾಗರಾಜ್, ನಾಡ ಗ್ರಾಪಂ ಸದಸ್ಯೆ ಶೋಭಾ, ಪ್ರಮುಖರಾದ ರಾಜೇಶ್ ಪಡುಕೋಣೆ, ನಿಸರ್ಗ ಪಡುಕೋಣೆ ಮತ್ತಿತರರು ಉಪಸ್ಥಿತರಿದ್ದರು.
ನಾಡ ಗ್ರಾಪಂ ಅಧ್ಯಕ್ಷೆ ಪಾರ್ವತಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ ಡಿಟಿಒ ಕಮಲ್ ಕುಮಾರ್, ಕುಂದಾಪುರ ಡಿಪೋ ಮ್ಯಾನೇಜರ್ ರಾಜೇಶ್ ಶೆಟ್ಟಿ, ಆರ್‌ಟಿಒ ಇಲಾಖೆಯ ಎಫ್‌ಡಿಎ ಶಾಂತರಾಜು ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.