ಕಾಸರಗೋಡು: ವಯನಾಡಿನಂತಹ ಮಹಾದುರಂತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು, ನಾಡಿನ ಜನತೆಯ ಸಂರಕ್ಷಣೆಗೆ ಮುಂದಾಗಬೇಕು ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಸದಾಶಿವ ಭಟ್ ಹರಿನಿಲಯ ತಿಳಿಸಿದ್ದಾರೆ.
ಎಣ್ಮಕಜೆ ಪಂಚಾಯಿತಿಯ ಇತಿಹಾಸ ಪ್ರಸಿದ್ಧ ಇಟ್ಟಿಪಳ್ಳ ಹಾಗೂ ಆಸುಪಾಸಿನಲ್ಲಿ ನಡೆಯುತ್ತಿರುವ ಅನಧಿಕೃತ ಕೆಂಪುಕಲ್ಲು ಕ್ವಾರೆಗಳ ವಿರುದ್ಧ ಸ್ಥಳೀಯ ನಾಗರಿಕರು ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಸಾಂಕೇತಿಕ ಮುಷ್ಕರ ಉದ್ಘಾಟಿಸಿ ಮಾತನಾಡಿದರು.
ಪುರಾತನ ಜಲಸಂಗ್ರಹಾಗಾರವಾಗಿರುವ ಇಟ್ಟಿಪಳ್ಳಕ್ಕೆ ಶತಮಾನದ ಇತಿಹಾಸವಿದ್ದು, ಇದನ್ನೂ ಬಿಡದೆ ಕೆಂಪುಕಲ್ಲು ದಂಧೆ ನಡೆಸಲಾಗುತ್ತಿದೆ. ಸನಿಹದಲ್ಲೇ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಆರಾಧನಾಲಯ, ಮಂದಿರ, ಕೆಳಭಾಗದಲ್ಲಿ ನೂರಾರು ಮನೆಗಳಿದ್ದು ಇವೆಲ್ಲವೂ ಕೆಂಪುಕಲ್ಲು ಕ್ವಾರೆಗಳಿಂದ ಭೀತಿ ಎದುರಿಸುವಂತಾಗಿದೆ. ಪ್ರಕೃತಿಯ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಸಂಭವಿಸುತ್ತಿರುವ ಮಹಾದುರಂತ ಕಣ್ಣ ಮುಂದಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕೆಂಪುಕಲ್ಲು ಕ್ವಾರಿಗಳಿಗೆ ಅನುಮತಿ ನೀಡುವ ಮೂಲಕ ಜನಸಾಮಾನ್ಯರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದರು.
ಗೋಪಾಲಕೃಷ್ಣ ಭಟ್, ಪುರುಷೋತ್ತಮ ನಾಯಕ್ ಮೊದಲಾದವರು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅನಧಿಕೃತ ಕಲ್ಲಿನ ಕ್ವಾರಿ ನಿಯಂತ್ರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಸಮಾಜಸೇವಕಿ ಲಲಿತಾ ಕೇಶವ ನಾಯ್ಕ ಖಂಡಿಗೆ ಸ್ವಾಗತಿಸಿದರು. ಶ್ರೀನಿಧಿ ಭಟ್ ವಂದಿಸಿದರು.