ಕಾಸರಗೋಡು: ನ್ಯಾಯಾಲಯ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದ ತೀರ್ಮಾನವನ್ನು ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳುವಂತೆ ಭಾರತೀಯ ವಕೀಲರ ಪರಿಷತ್ ಕಾಸರಗೋಡು ಘಟಕ ಒತ್ತಾಯಿಸಿದೆ.
ಏಕಾಏಕಿ ನ್ಯಾಯಾಲಯ ಶುಲ್ಕ ಏರಿಸಿರುವ ಸರ್ಕಾರದ ಧೋರಣೆ ಖಂಡಿಸಿ ಸಂಘಟನೆ ವತಿಯಿಂದ ಕಾಸರಗೋಡಿನಲ್ಲಿ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ.ರವೀಂದ್ರನ್ ಮಾತನಾಡಿ, ಶುಲ್ಕ ಹೆಚ್ಚಿಸುವ ನಿರ್ಧಾರದ ಮೂಲಕ ಸರ್ಕಾರ, ನ್ಯಾಯ ಕೋರಿ ನ್ಯಾಯಾಲಯಕ್ಕೆ ಹೋಗುವ ಜನಸಾಮಾನ್ಯರನ್ನು ದೋಚಲು ಮುಂದಾಗಿರುವುದು ವಿಪರ್ಯಾಸ. ಉಚಿತ ನ್ಯಾಯ ಒದಗಿಸಬೇಕಾದ ಸರ್ಕಾರ, ನ್ಯಾಯಾಲಯಗಳನ್ನು ಆದಾಯದ ಮೂಲವನ್ನಾಗಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಶುಲ್ಕ ಹೆಚ್ಚಳಗೊಳಿಸುವ ಸರ್ಕಾರದ ಗೆಜೆಟ್ ಅಧಿಸೂಚನೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ಪ್ರತಿಭಟಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಎ.ಸಿ.ಅಶೋಕ್ ಕುಮಾರ್, ಕಾರ್ಯದರ್ಶಿ ನವೀನ್ ರಾಜ್, ವಕೀಲರಾದ ಕರುಣಾರನ್ ನಂಬಿಯಾರ್, ಮುರಳೀಧರನ್, ಸದಾನಂದ ರೈ, ಸದಾನಂದ ಕಾಮತ್, ಬಿ.ಗಣೇಶ್, ಜಯಾ ಅಡೂರ್, ಕೆ.ಎಂ.ಬೀನಾ, ರಾಹುಲ್ ದಾಸ್ ಮೊದಲಾದವರಿದ್ದರು.