ಬೆಳ್ತಂಗಡಿ: ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಕ್ರಿಯೆ ವಿರೋಧಿಸಿ ಮುಂಡಾಜೆ, ಚಾರ್ಮಾಡಿ, ನೆರಿಯ ಈ ಮೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಮಸ್ಜಿದ್, ಮೊಹಲ್ಲಾಗಳ ಒಗ್ಗೂಡುವಿಕೆಯೊಂದಿಗೆ ಪ್ರತಿಭಟನಾ ಸಭೆ ಕಕ್ಕಿಂಜೆ ಪೇಟೆ ಹಾರಿಸ್ ಹೋಟೆಲ್ ಬಳಿ ನಡೆಯಿತು.
ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ವಾಟ್ಸಾೃಪ್ ಬಳಗದ ಸಂಯೋಜನೆಯಲ್ಲಿ ಹೋರಾಟ ಸಂಘಟಿಸಲಾಗಿತ್ತು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ವಿಷಯ ಮಂಡಿಸಿದರು.
ಆರು ಜಮಾಅತ್‌ಗಳ ಪದಾಧಿಕಾರಿ, ಧರ್ಮಗುರು, ಜಮಾತ್‌ನವರು, ವಿವಿಧ ಸಂಘಟನೆ ಪ್ರಮುಖರು ಭಾಗವಹಿಸಿದ್ದರು. ಕಕ್ಕಿಂಜೆ ಪೇಟೆ ಮೂಲಕ ಗ್ರಾಪಂ ಕಚೇರಿವರೆಗೆ ಜಾಥಾ ನಡೆಸಿ ರಾಷ್ಟ್ರಪತಿಗೆ ಗ್ರಾಪಂ ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಅಶ್ರಫ್ ಚಾರ್ಮಾಡಿ ಪ್ರಸ್ತಾವನೆಗೈದರು. ಅಬ್ದುಲ್ ನಾಸಿರ್ ಕಲ್ಲಗುಡ್ಡೆ ವಂದಿಸಿದರು. ಕಬೀರ್ ಅರೆಕ್ಕಲ್ ಕಾರ್ಯಕ್ರಮ ನಿರೂಪಿಸಿದರು. ನಝೀರ್, ಶರೀಫ್ ಎಚ್.ಎ., ಹನೀಫ್ ಕೋಣೆ ಮೊದಲಾದವರು ನಾಯಕತ್ವ ವಹಿಸಿದ್ದರು.