ಗುರುಪುರ: ಉಡುಪಿಯ ಪಡುಬಿದ್ರಿ-ಕಾಸರಗೋಡು ಮಧ್ಯೆ ವಿದ್ಯುತ್ ಪೂರೈಕೆ ನಿಯಮಿತದ(ಯುಕೆಟಿಎಲ್) 440 ಕೆವಿ ವಿದ್ಯುತ್ ಮಾರ್ಗ ಯೋಜನೆಗಾಗಿ ಕುಪ್ಪೆಪದವಿನ ನೀರಳಿಕೆ ಎಂಬಲ್ಲಿ ನಡೆಯುತ್ತಿದ್ದ ವಿದ್ಯುತ್ ಟವರ್ ಸ್ಥಾಪನೆ ಕಾಮಗಾರಿ ಮುಂದಿನ ಆದೇಶದವರೆಗೆ ನಿಲ್ಲಿಸುವಂತೆ ಕಂಪನಿಗೆ ಸೂಚಿಸಿದ ಮಂಗಳೂರು ತಹಸೀಲ್ದಾರ್ ರಮೇಶ್ ಬಾಬು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜೆಸಿಂತಾ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದರು.
ಜೆಸಿಂತಾ ಅವರ ವರ್ಗದ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅವರಿಗೆ ಬೆದರಿಕೆಯೊಡ್ಡಿ ಕಾಮಗಾರಿ ನಡೆಸಿದ್ದಾರೆ. ಕಾಮಗಾರಿ ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ ಸಂತ್ರಸ್ತೆ ಹಾಗೂ ರೈತ ಸಂಘದ ಕಾರ್ಯಕರ್ತರನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನೀರಳಿಕೆಯಲ್ಲಿ ಸಂತ್ರಸ್ತರು ಹಾಗೂ ಕರ್ನಾಟಕ ರೈತ ಸಂಘ ಹಸಿರು ಸೇನೆ ಹಾಗೂ ಕ್ಯಾಥೊಲಿಕ್ ಸಭಾದ ಸದಸ್ಯರು ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ರಮೇಶ್ ಬಾಬು ಮಾತನಾಡಿ, ವಿದ್ಯುತ್ ಟವರ್ ಸ್ಥಾಪನೆ ಕಾಮಗಾರಿ ನಡೆಯುವ ಜಾಗದ ಕುರಿತು ಮಾಹಿತಿ ಪತ್ರ ಸಿದ್ಧಪಡಿಸಿ ಆಯಾಯ ಗ್ರಾಮ ಪಂಚಾಯಿತಿ/ವಿಎ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಆಕ್ಷೇಪವಿಲ್ಲ ಎಂಬುವುದನ್ನು ಖಾತ್ರಿಪಡಿಸಿಕೊಂಡು ಕಾಮಗಾರಿ ನಡೆಸಬೇಕೆಂಬುದು ಜಿಲ್ಲಾಧಿಕಾರಿಯವರ ಸೂಚನೆಯಿದೆ. ಜೆಸಿಂತಾ ಅವರಿಗೆ ನ್ಯಾಯಯುತ ಪರಿಹಾರ ನೀಡಲು ಕಂಪನಿ ಸಿದ್ಧವಿದೆ. ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರೈತ ಸಂಘದ ಮುಖಂಡರ ಉಪಸ್ಥಿತಿಯಲ್ಲಿ ವಿದ್ಯುತ್ ಗುತ್ತಿಗೆ ಕಾಮಗಾರಿ ನಡೆಸುತ್ತಿರುವ ಕಂಪನಿ ಅಧಿಕಾರಿಗಳ ಜತೆ ತಾಲೂಕು ಕಚೇರಿಯಲ್ಲಿ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿ, ಸಂತ್ರಸ್ತರು ಹಾಗೂ ಪ್ರಮುಖರಿಗೆ ಆಹ್ವಾನ ನೀಡಿದರು.
ಪ್ರತಿಭಟನೆಯಲ್ಲಿ ಸಂತ್ರಸ್ತೆ ಜೆಸಿಂತಾ ಕುಟಿನ್ಹೊ ಅವರೊಂದಿಗೆ ಕರ್ನಾಟಕ ರೈತ ಸಂಘ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು, ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲ್ಲಿಮಾರ್, ಸಂಘದ ಮುಖಂಡರಾದ ಇಬ್ರಾಹಿಂ ಕಲೀಲ್ ಪುಚ್ಚತ್ತಡ್ಕ, ಕೃಷ್ಣ ಪ್ರಸಾದ್ ಭಟ್ ಮಿಜಾರು, ಚಂದ್ರಹಾಸ ಶೆಟ್ಟಿ ಇನ್ನ, ಸಂಘದ ಕಾರ್ಯಕರ್ತರು, ಕ್ಯಾಥೊಲಿಕ್ ಸಭಾದ ರೋಲ್ಫಿ, ಆಲ್ವಿನ್ ಅಲ್ಪೋನ್ಸ್ ಮತ್ತಿತರರು. ಬಜ್ಪೆ ಪೊಲೀಸ್ ವೃತ್ತ ನಿರೀಕ್ಷಕ ಸಂದೀಪ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ?
ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ರಮೇಶ್ ಬಾಬು ಅವರೊಂದಿಗೆ ರೈತ ಮುಖಂಡರು ಮಾತುಕತೆ ನಡೆಸಿ, ಟವರ್ ಸ್ಥಾಪನೆ ವೇಳೆ ನಿರ್ದಿಷ್ಟ ನಿಯಮ ಉಲ್ಲಂಘಿಸಲಾಗಿದೆ. ಇಲ್ಲಿ ಅಕ್ರಮವಾಗಿ ಕಾಮಗಾರಿ ಮುಂದುವರಿದಿದೆ. ನ್ಯಾಯಾಲಯದ ಆದೇಶವಿದೆ ಎಂದು ಬೆದರಿಕೆಯೊಡ್ಡಲಾಗಿದ್ದು, ಜೆಸಿಂತಾ ಅವರ ಸರ್ವೇ ನಂಬ್ರ 135/4ರ ಜಾಗಕ್ಕೆ ಇಂತಹ ಯಾವುದೇ ಆದೇಶ ಅನ್ವಯವಾಗುವುದಿಲ್ಲ. ಆದ್ದರಿಂದ ಕಂಪನಿಯಿಂದ ನಡೆದಿರುವ ದೌರ್ಜನ್ಯಕ್ಕೆ ಪರಿಹಾರ ಸಿಗಬೇಕು. ರೈತ ಮಹಿಳೆ ಬೀದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಕಾನೂನು ರೀತ್ಯಾ ಹೋರಾಟ ನಡೆಸುವ ಸಂಘವು ತಹಸೀಲ್ದಾರ್ ಅವರ ಸೂಚನೆಗೆ ಗೌರವ ನೀಡಿ, ಪ್ರತಿಭಟನೆ ನಿಲ್ಲಿಸಿದ್ದೇವೆ. ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದರೆ ಹೋರಾಟ ನಡೆಸಲಿದ್ದೇವೆ. ವಿನೋದ್ ಭಟ್ ಪಾದೆಕಲ್ಲು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ