ಜಿಲ್ಲೆ

ಕಾಡಾನೆ ಹಾವಳಿ ತಡೆ ಶಾಶ್ವತ ಕ್ರಮ : ಕೆಎಸ್‌ಎಂಸಿಎ ಆಗ್ರಹ : ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಕೃಷಿಕರು ಆತಂಕ ಪಡುವಂತಹ ವಾತಾವರಣವಿದ್ದು, ಕಾಡಾನೆಗಳಿಗೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಕೆ.ಎಸ್.ಎಂ.ಸಿ.ಎ. ವತಿಯಿಂದ ಬೆಳ್ತಂಗಡಿ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ನಡೆಸಿ ವಲಯ ಅರಣ್ಯ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಕೆ.ಎಸ್.ಎಂ.ಸಿ.ಎ. ನಿರ್ದೇಶಕ ಫಾ.ಆದರ್ಶ್ ಜೋಸೆಪ್ ಮಾತನಾಡಿ, ಕಾಡಾನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಕರು ನೋಟಾ ಚಳವಳಿಯಂತಹ ದಾರಿ ಅನುಸರಿಸಬೇಕಾಗಿ ಬರಲಿದೆ ಎಂದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮಾತನಾಡಿ, ಕಾಡಾನೆ ಸಮಸ್ಯೆಗೆ ಕೂಡಲೇ ಸ್ಪಂದಿಸಲಾಗುತ್ತಿದೆ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದರು.

ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೆರವಣಿಗೆ ಆರಂಭಿಸಿ ಮೂರು ಮಾರ್ಗದ ಮೂಲಕ ಬೆಳ್ತಂಗಡಿ ಅರಣ್ಯ ಇಲಾಖೆ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ಸಂತ್ರಸ್ತರು ಮನವಿ ಸಲ್ಲಿಸಿದರು.

ಕೆ.ಎಸ್.ಎಂ.ಸಿ.ಎ. ಅಧ್ಯಕ್ಷ ಬಿಟ್ಟಿ ನೆಡುನಿಲಂ, ಚಿಂತಕ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿದರು. ಸಂಘಟನೆ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ., ಪಿ.ಆರ್.ಒ ಸೆಬಾಸ್ಟಿಯನ್ನ ಪಿ.ಸಿ., ಯುವ ಘಟಕದ ಸಂಚಾಲಕ ರೋಬಿನ್ ಓಡಂಪಳ್ಳಿ, ಧರ್ಮಸ್ಥಳ ವಲಯ ಅಧ್ಯಕ್ಷ ಜೈಸನ್ ಪಟ್ಟೇರಿ, ಧರ್ಮಗುರುಗಳಾದ ರಿಜೊ, ಥಾಮಸ್, ಜೋಸೆಫ್, ಮುಖಂಡರಾದ ಕ್ಸೇವಿಯರ್ ಪಾಲೇಲಿ, ಕೇಶವ ಪಿ.ಬೆಳಾಲು, ದೇವಸ್ಯ ಟಿ.ವಿ.ಧರ್ಮಸ್ಥಳ, ರೋಯಿ ಪುದುವೆಟ್ಟು, ಪ್ರದೀಪ್ ಕೆ.ಸಿ. ರೆಜಿ ಮೊದಲಾದರಿದ್ದರು.

ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಭಾಗಗಳಲ್ಲಿ ಕಾಡಾನೆ ಹಾವಳಿ ತೀರಾ ಹೆಚ್ಚಾಗಿದೆ. ಕೃಷಿಕರು ತಮ್ಮ ತೋಟಗಳಿಗೆ ತೆರಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಒಬ್ಬ ಕೃಷಿಕ ಆನೆ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ. ಹೋರಾಟದ ಮುಂದಿನ ಭಾಗವಾಗಿ ಅರಣ್ಯ ಸಚಿವರನ್ನು ಭೇಟಿಯಾಗಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗಳು ಈಡೇರದಿದ್ದರೆ ಹೋರಾಟ ನಡೆಸಲಾಗುವುದು. ಬಿಟ್ಟಿ ನೆಡುನಿಲಂ ಕೆ.ಎಸ್.ಎಂ.ಸಿ.ಎ ಅಧ್ಯಕ್ಷ