ಜಿಲ್ಲೆ

ಸಮುದ್ರಕೊರೆತಕ್ಕೆ ಶಾಶ್ವತ ಪರಿಹಾರ ಆಗ್ರಹಿಸಿ ಪ್ರತಿಭಟನೆ: ಜನರ ಜೀವ, ಮನೆ, ಆಸ್ತಿಗೆ ರಕ್ಷಣೆ ನೀಡುವಂತೆ ಬಿಜೆಪಿ ಒತ್ತಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕರಾವಳಿ ಪ್ರದೇಶವನ್ನು ಸಮುದ್ರ ಕೊರೆತದಿಂದ ರಕ್ಷಿಸಿ, ಜನರ ಜೀವ, ಮನೆ, ಆಸ್ತಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಉದುಮ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ಅಭಿಯಾನ ನಡೆಯಿತು.

ಮಹಿಳೆಯರು, ಕಾರ್ಯಕರ್ತರು ಬೇಕಲದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತ್ರಿಕ್ಕನ್ನಾಡು ಪ್ರದೇಶದ ಕರಾವಳಿಗೆ ಆಗಮಿಸಿದ್ದರು. ಸಮುದ್ರ ಕೊರೆತದಿಂದ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಎದುರಿನ ರಸ್ತೆಯನ್ನು ಆಕ್ರಮಿಸಲು ಕೆಲವೇ ಮೀಟರ್ ಬಾಕಿಯಿದ್ದು, ಕಾಸರಗೋಡು- ಚಂದ್ರಗಿರಿ- ಕಾಞಂಗಾಡು ಕೆಎಸ್‌ಟಿಪಿ ರಸ್ತೆ ಸಮುದ್ರ ಪಾಲಾಗುವ ಭೀತಿ ಇದೆ. ರಸ್ತೆ ಹಾನಿಗೀಡಾದಲ್ಲಿ ತ್ರಿಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನಕ್ಕೂ ಹಾನಿ ಸಂಭವಿಸುವ ಸಾಧ್ಯತೆಯಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಘೊಷಣೆ ಕೂಗುತ್ತಾ ಸಮುದ್ರಕ್ಕಿಳಿದು ಪ್ರತಿಭಟನೆ ಮುಂದುವರಿಸಿದರು. ಇದು ಸ್ಥಳದಲ್ಲಿದ್ದ ಪೊಲೀಸರಲ್ಲೂ ಆತಂಕ ಮೂಡಿಸಿದ್ದು, ನಂತರ ಪ್ರತಿಭಟನಕಾರರನ್ನು ಸಮುದ್ರದಿಂದ ಮೇಲಕ್ಕೆ ತೆರಳುವಂತೆ ಮನವೊಲಿಸಿದರು. ಪ್ರತಿಭಟನಕಾರರು ಮಳೆ ಲೆಕ್ಕಿಸದೆ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.

ಬಿಜೆಪಿ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಮಾತನಾಡಿ, ದೇವಸ್ಥಾನದಿಂದ ಸಮುದ್ರ ದಡದ ಮಂಟಪ, ಶ್ರೀ ಕೊಡುಂಗಲ್ಲೂರು ದೇವಿಯ ಕಾಣಿಕೆ ಹುಂಡಿ ಸಮುದ್ರ ಪಾಲಾಗಿದೆ. ಈ ಪ್ರದೇಶದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಉದುಮ ಮಂಡಲ ಸಮಿತಿ ಅಧ್ಯಕ್ಷೆ ಶೈನಿಮೋಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಉದುಮ ಮಂಡಲ ಉಪಾಧ್ಯಕ್ಷರಾದ ತ್ಯಾಂಪನ್ ಆಚೇರಿ, ಸದಾಶಿವನ್ ಮಣಿಯಂಗಾನಂ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಕೂಟಕ್ಕಣಿ, ಮುಖಂಡರಾದ ಸೌಮ್ಯಾ ಪದ್ಮನಾಭನ್, ಮಧುಸೂಧನನ್, ವಿನಿಲ್ ಮುಲ್ಲಚೇರಿ, ಮಣಿಕಂದನ್, ನಿತಿಲ್ ಕೃಷ್ಣ, ವಿನಯನ್ ಕೋಟಿಕುಳಂ ಇದ್ದರು.