ಜಿಲ್ಲೆ

ಕಾಂಗ್ರೆಸ್ ಮುಖಂಡನಿಂದ ಜನಾರ್ದನ ಪೂಜಾರಿ ಟೀಕೆ : ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಆರೋಪ

ಸೌಮ್ಯ ಆರ್

ಗುರುಪುರ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಪ್ರಶ್ನಿಸುವ ಕಾಂಗ್ರೆಸ್ ಮುಖಂಡರ ಮನಸ್ಥಿತಿ ಹಾಗೂ ಅವರ ನಕಲಿ ಜಾತ್ಯತೀತತೆ ಜನರು ಅರಿತುಕೊಳ್ಳುವ ಸಮಯ ಬಂದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಕಾವೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮನುಕುಲದ ಸಮಗ್ರ ಏಳಿಗೆಗೆ ಶ್ರೀ ನಾರಾಯಣ ಗುರುಗಳ ತತ್ವಾದರ್ಶ ದಾರಿದೀಪ. ಹಿಂದು ಸಮಾಜ ದೇವಮಾನವ ರೂಪದಲ್ಲಿ ಕಾಣುವ ಬ್ರಹಶ್ರೀ ನಾರಾಯಣ ಗುರುಗಳ ಹೆಸರೆತ್ತುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ಮುಖಂಡನೊಬ್ಬ ಗುರುಗಳಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಕೇವಲ ಒಂದು ಜಾತಿ ಪಂಗಡಕ್ಕೆ ಸೀಮಿತವಾಗಿರದೆ ಪೂರ್ಣ ಸಮಾಜದ ಒಳಿತು ಬಯಸಿ, ಮಾನವ ಕುಲದ ಉದ್ಧಾರದ ಸಂದೇಶ ಸಾರಿರುವ ಮಹಾನ್ ವ್ಯಕ್ತಿತ್ವ ಶ್ರೀ ನಾಯಾಯಣ ಗುರುಗಳ್ದಾಗಿದೆ ಎಂದರು.

ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸಿ ತಮ್ಮ ನಿಲುವು ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಎಂಬಾತ ‘ನಿಮ್ಮನ್ನು ಮಂತ್ರಿ ಮಾಡಿದ್ದು ನಾರಾಯಣ ಗುರುಗಳ ಸಿದ್ಧಾಂತವೋ’ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ. ಇದರಿಂದ ಹಿಂದು ಸಮಾಜಕ್ಕೆ ಅತೀವ ನೋವಾಗಿದೆ. ಬಾಯಿಗೆ ಬಂದಂತೆ ಮಾತನಾಡಿದ ಆ ಮುಖಂಡನನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು. ಆತ ಹಿಂದು ಸಮಾಜದ ಕ್ಷಮೆ ಯಾಚಿಸಬೇಕು ಎಂದು ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.