ಜಿಲ್ಲೆ

ಯಕ್ಷ ಗುರುಗಳ ಮೇಲಿದೆ ಪರಂಪರೆ ಉಳಿಸುವ ಹೊಣೆ : ಡಾ.ಎಂ.ಪ್ರಭಾಕರ ಜೋಷಿ ಅಭಿಮತ

ಬಂಟ್ವಾಳ: ಪರಂಪರೆಯನ್ನು ಉಳಿಸುವ ಕರ್ತವ್ಯ ಇಂದು ಯಕ್ಷಗಾನ ಗುರುಗಳ ಹಾಗೂ ಕಲಾವಿದರ ಮೇಲಿದೆ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಹಾಗೂ ಹರಿನಾರಾಯಣ ಬೈಪಡಿತ್ತಾಯ ಮಹಾಗುರುಗಳಾಗಿದ್ದು, ಒಬ್ಬ ಗುರುವಿನ ಹೆಸರಲ್ಲಿ ಮತ್ತೊಬ್ಬ ಗುರುವಿಗೆ ಪ್ರಶಸ್ತಿ ಸಂದಿರುವುದು ವಿಶೇಷ ಎಂದು ಸಂಶೋಧಕ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.

ಬೆಂಗಳೂರಿನ ಡಿಜಿ ಯಕ್ಷ ಫೌಂಡೇಷನ್ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಲೀಲಾವತಿ ಮತ್ತು ಹರಿನಾರಾಯಣ ಬೈಪಡಿತ್ತಾಯ ಹೆಸರಲ್ಲಿ ನೀಡುವ ಶ್ರೀಹರಿಲೀಲಾ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಯಕ್ಷಗಾನದಲ್ಲಿ ಗುರುಪರಂಪರೆ ಮುಂದುವರಿಯಬೇಕಾಗಿದೆ ಎಂದರು. ಕಲಾವಿದ ಪುರುಷೋತ್ತಮ ಭಟ್ ನಿಡುವಜೆ ಅಭಿನಂದನಾ ಮಾತುಗಳನ್ನಾಡಿದರು. ಯಕ್ಷಕಲಾ ಪೊಳಲಿ ಸಂಸ್ಥೆ ಸಂಚಾಲಕ ಪೊಳಲಿ ವೆಂಕಟೇಶ ನಾವಡ, ಪ್ರಮುಖರಾದ ಕೆ.ಲಕ್ಷ್ಮೀನಾರಾಯಣ ಕುಂಡಂತಾಯ, ಬಾಲಚಂದ್ರ ರಾವ್, ಆನಂದ ಗುಡಿಗಾರ, ಜನಾರ್ದನ ಅಮ್ಮುಂಜೆ ಉಪಸ್ಥಿತರಿದ್ದರು.

ಸುಧನ್ವ ಮೋಕ್ಷ ತಾಳಮದ್ದಳೆಯಲ್ಲಿ ಶ್ರೀನಿವಾಸ ಬಳ್ಳಮಂಜ ಭಾಗವತಿಕೆ, ಎಂ.ಪ್ರಭಾಕರ ಜೋಷಿ, ಹರೀಶ್ ಬಳಂತಿಮೊಗರು ಮತ್ತು ದಿನೇಶ ಶೆಟ್ಟಿ ಕಾವಳಕಟ್ಟೆ ಮುಮ್ಮೇಳದಲ್ಲಿದ್ದರು. ಆನಂದ ಗುಡಿಗಾರ, ಗಿರೀಶ ಭಟ್ ಕಿನಿಲಕೋಡಿ, ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಹರೀಶ್ ರಾವ್ ಆಡೂರು ಚೆಂಡೆ-ಮದ್ದಳೆಯಲ್ಲಿ ಸಹಕರಿಸಿದರು. ಹರಿನಾರಾಯಣ ಬೈಪಡಿತ್ತಾಯ ಪ್ರಸ್ತಾಪಿಸಿದರು. ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿದರು. ಸಾಯಿಸುಮಾ ನಾವಡ ಕಾರ್ಯಕ್ರಮ ನಿರ್ವಹಿಸಿದರು.

ಶಿಷ್ಯವೃಂದದಿಂದ ಯಕ್ಷಗಾನ ಪ್ರದರ್ಶನ

ಹರಿಲೀಲಾ ಶಿಷ್ಯವೃಂದದಿಂದ ಯಕ್ಷಗಾನ ನಡೆಯಿತು. ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಗಿರೀಶ್ ರೈ ಕಕ್ಯಪದವು, ಜಯರಾಮ ಆಡೂರು, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಭಾಗವತಿಕೆ, ಆಡೂರು ಲಕ್ಷ್ಮೀನಾರಾಯಣ ರಾವ್, ಶಂಕರ ಭಟ್ ಕಲ್ಮಟ್ಕ, ಸೋಮಶೇಖರ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ವಿಕಾಸ್ ರಾವ್ ಪುನರೂರು, ಅವಿನಾಶ್ ಬೈಪಡಿತ್ತಾಯ ಮತ್ತು ಸಮರ್ಥ್ ಉಡುಪ ಚೆಂಡೆ-ಮದ್ದಳೆಯಲ್ಲಿ ಸಹಕರಿಸಿದರು.