ಜಿಲ್ಲೆ

ಮಕ್ಕಳಲ್ಲಿ ಒಳ್ಳೆಯ ಚಿಂತನೆ ಬೆಳೆಸುವ ಜವಾಬ್ದಾರಿ : ರಾಜ್ಯಪಾಲ ಅಬ್ದುಲ್ ನಜೀರ್ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಒಳ್ಳೆಯ ಚಿಂತನೆಗಳನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಳ್ಳಬೇಕು. ಮಾತ್ರವಲ್ಲ ಅದನ್ನು ಅನುಷ್ಠಾನಗೊಳಿಸಬೇಕು. ಹೆತ್ತವರು ತಾವು ಸಂಸ್ಕಾರವಂತರಾಗುವುದು ಮಾತ್ರವಲ್ಲ ಮಕ್ಕಳಲ್ಲೂ ವಿದ್ಯೆಯ ಜತೆಗೆ ಬುದ್ಧಿ, ಸಂಸ್ಕಾರವನ್ನು ಕಲಿಸಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಜೀರ್ ಹೇಳಿದರು.

ಬನ್ನಡ್ಕದಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಶನಿವಾರ ಪ್ರೇರಣಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಾಮಾಜಿಕ ಜವಾಬ್ದಾರಿ ಮೂಡಿಸುವಂತಿರಬೇಕು. ಬದುಕಿನಲ್ಲಿ ಅದು ಸಕಾರಾತ್ಮಕ ಬದಲಾವಣೆ ತರಬೇಕು. ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದ ಚಿತ್ತವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಉಪಕುಲಪತಿ ಪ್ರೊ.ಎಸ್.ಎಲ್.ಧರ್ಮ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ತಹಸೀಲ್ದಾರ್ ಶ್ರೀಧರ್ ಮುಂದಲಮನಿ, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಕಾಲೇಜಿನ ಸಂಯೋಜಕ ಕುಮಾರ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಆಶಾ ಶಾಲೆಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ವಂದಿಸಿದರು.

ಕಾಲೇಜು ಮುಚ್ಚುವ ಅಪಪ್ರಚಾರ

2021ರಲ್ಲಿ ಪ್ರಾರಂಭವಾದ ಬನ್ನಡ್ಕ ಘಟಕ ಕಾಲೇಜು ಮಂಗಳೂರು ವಿವಿಯ ಕಠಿಣ ನಿಯಮಗಳಿಂದ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳನ್ನು ರದ್ದುಪಡಿಸಲಾಗಿದೆ. ಕಾಲೇಜನ್ನು ಮುಚ್ಚಲಾಗುತ್ತದೆ ಎಂಬ ಅಪಪ್ರಚಾರ ಕೇಳಿಬರುತ್ತಿದೆ. ನನ್ನ ಕನಸಿನ ಯೋಜನೆ ಈ ಕಾಲೇಜು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ರಾಜ್ಯಪಾಲರು ಮತ್ತು ವಿವಿ ಕುಲಪತಿಗಳನ್ನು ಉಮಾನಾಥ ಕೋಟ್ಯಾನ್ ಆಗ್ರಹಿಸಿದರು.

ಕಾಲೇಜನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಸರ್ಕಾರದ ನಿಯಮವನ್ನು ಪಾಲಿಸಬೇಕಾಗಿದೆಯಷ್ಟೆ. ಬನ್ನಡ್ಕ ಕಾಲೇಜನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಪ್ರೊ.ಎಸ್.ಎಲ್.ಧರ್ಮ ಮಂಗಳೂರು ವಿವಿ ಉಪಕುಲಪತಿ