ಜಿಲ್ಲೆ

ಮೂರನೇ ಅಲೆಗೆ ಸಿದ್ಧತೆ: ಬೆಂಗಳೂರಲ್ಲಿ ಮಕ್ಕಳಿಗಾಗಿ 1,419 ಬೆಡ್​​ ಮೀಸಲು

ಬೆಂಗಳೂರು : ಸಂಭಾವ್ಯ ಮೂರನೇ ಕರೊನಾ ಅಲೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಹೆಚ್ಚಾಗಿ ಕರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 2,34,812 ಮಕ್ಕಳು ಕರೊನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 117 ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಸಿದ್ಧತಾ ಕ್ರಮಗಳ ಅಂಗವಾಗಿ, ಬೆಂಗಳೂರಿನಲ್ಲಿ‌ ಮಕ್ಕಳಿಗಾಗಿ 1419 ಬೆಡ್​​ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 47 ವೆಂಟಿಲೇಟರ್​​ಗಳುಳ್ಳ ಐಸಿಯು ಬೆಡ್​ಗಳಾಗಿವೆ. 116 ವೆಂಟಿಲೇಟರ್ ರಹಿತ ಐಸಿಯು ಬೆಡ್​ಗಳ ವ್ಯವಸ್ಥೆ ಮಾಡಲಾಗಿದ್ದು, 671 ಹೆಚ್‌ಡಿಯು ಬೆಡ್​ಗಳನ್ನೂ ಒದಗಿಸಲಾಗಿದೆ, 585 ಸಾಮಾನ್ಯ ಬೆಡ್​​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವೆ ಜೊಲ್ಲೆ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಾಲ್ಕು ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ನಗರದ ಕೆ.ಆರ್.ಪುರಂ ಐಟಿಐನಲ್ಲಿ 150 ಬೆಡ್ ಸಾಮರ್ಥ್ಯ ಕಲ್ಪಿಸಲಾಗಿದ್ದು, 100 ಆಕ್ಸಿಜನ್ ಬೆಡ್​ ಮತ್ತು 50 ಐಸಿಯು ಬೆಡ್​​ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಕಲ್ಯಾಣ‌ ಮಂಟಪ, ಹಾಸ್ಟೆಲ್​ಗಳು,‌ ಮೊರಾರ್ಜಿ ದೇಸಾಯಿ ಕಟ್ಟಡಗಳನ್ನು ಕರೊನಾ ಆರೈಕೆ ಕೇಂದ್ರಗಳಾಗಿ ಮಾಡಲಾಗುವುದು. ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಪರಿಣಿತ ವೈದ್ಯರನ್ನು ಗುರುತಿಸಲಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.