ಮೂಳೂರಿನ ತೊಟ್ಟಂ ಪ್ರದೇಶಕ್ಕೆ ತಹಸೀಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲಿಸಿದರು 
ಜಿಲ್ಲೆ

ಕಡಲ್ಕೊರೆತ ತಡೆಗೆ ಮುಂಜಾಗ್ರತಾ ಕ್ರಮ : ತಹಸೀಲ್ದಾರ್ ಪ್ರತಿಭಾ ಆರ್. ಸೂಚನೆ

ಪಡುಬಿದ್ರಿ: ಪ್ರತಿವರ್ಷ ಕಡಲ್ಕೊರೆತ ಉಂಟಾಗುವ ಕಾಪು ತಾಲೂಕಿನ ಮೂಳೂರಿನ ತೊಟ್ಟಂ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ಮತ್ತು ಜಾರುತ್ತಿರುವ ಬ್ರೇಕ್ ವಾಟರ್ ಕಲ್ಲುಗಳನ್ನು ವ್ಯವಸ್ಥಿತಗೊಳಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ತಹಸೀಲ್ದಾರ್ ಪ್ರತಿಭಾ ಆರ್. ಸೂಚನೆ ನೀಡಿದರು.

ಮೂಳೂರು ತೊಟ್ಟಂ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾತನಾಡಿ, ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸ್ಥಳೀಯ ನಿವಾಸಿಗಳಿಗೆ ಕಡಲ್ಕೊರೆತದ ಪರಿಸ್ಥಿತಿ ಕುರಿತು ತಿಳಿವಳಿಕೆ ನೀಡಿದ ಅವರು, ಸಸ್ಯವರ್ಗದ ಉಪಸ್ಥಿತಿಯು ಸಮುದ್ರದ ಸವೆತ, ಚಂಡಮಾರುತದಂತ ಬಿರುಗಾಳಿಗಳಿಗೆ ನೈಸರ್ಗಿಕ ನಿರೋಧಕವಾಗಿರುವುದು ಸಾಬೀತಾಗಿದೆ ಎಂಬುದನ್ನು ಗಮನಿಸಲಾಗಿದೆ. ಆದ್ದರಿಂದ ನಾವು ಕಡಲ್ಕೊರೆತ ಎದುರಿಸಲು ಸಮರ್ಥನೀಯ ಕ್ರಮವಾಗಿ ಜೈವಿಕ ತಡೆಗೋಡೆಯಾಗಿ ಜೈವಿಕ ರಕ್ಷಾಕವಚ ನಿರ್ಮಿಸಬಹುದು ಎಂದರು. ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಲೋಕನಾಥ್ ಲಮಾಣಿ ಅವರೊಂದಿಗಿದ್ದರು.