ಹೊಸಪೇಟೆ: ರಾಜ್ಯದ ಇತಿಹಾಸಿ ಕಲೆ ಇಂದಿಗೂ ಪ್ರಚಲಿತದಲ್ಲಿರುವ ನಾಟಕ, ಲಲಿತ ಕಲೆಗಳು ಜನ ಸಾಮಾನ್ಯರಿಗೆ ಹತ್ತಿರವಾಗಿವೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಟಕ ರಚನೆ, ನಟನೆ ಹಾಗೂ ನಿರ್ದೇಶನದ ಹತ್ತು ದಿನದ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಟಕ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಅನೇಕ ಕಲಾವಿದರು ಜೀವನವನ್ನೇ ನಾಟಕ ರಂಗಕ್ಕೆ ಮುಡಿಪಾಗಿಟ್ಟಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ಯಾವುದೇ ಭೇದವಿಲ್ಲದೆ ನಾಟಕ ಪ್ರದರ್ಶನ ನಡೆಯುತ್ತವೆ. ನಟನೆಗೆ ಪೂರ್ವ ಸಿದ್ಧತೆ ಅವಶ್ಯಕ. ಶಿಬಿರದ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಟಿ.ಬಿ.ಡ್ಯಾಂನ ಕನ್ನಡ ಕಲಾ ಸಂಘ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ ಮಾತನಾಡಿ, ನಾಟಕ, ನಟನೆ, ನಿರ್ದೇಶನ ತ್ರಿವೇಣಿ ಸಂಗಮ ಎಂಬಂತೆ ಮೂರು ಕಲೆಗಳು ಒಂದೇ ಶಿಬಿರದಲ್ಲಿ ಆಯೋಜಿಸಲಾಗಿದೆ. ಕನ್ನಡ ಕಲಾ ಸಂಘ 6 ದಶಕಗಳಿಂದ ರಂಗಭೂಮಿ ಸೇವೆ ಮಾಡುತ್ತಿದೆ. ಪ್ರಸ್ತುತ ನೃತ್ಯ, ಸಂಗೀತ, ನಾಟಕ ಕಲೆಗಳ ಅಗತ್ಯವಿದೆ. ಅದ್ದರಿಂದ ರಂಗಭೂಮಿ ಉಳಿವು ಮುಖ್ಯವಾಗಿದೆ ಎಂದು ಹೇಳಿದರು.