ಜಿಲ್ಲೆ

ದೇವೇಗೌಡರ ಕುಟುಂಬಕ್ಕೆ ಪ್ರೀತಮ್ ಪಂಥಾಹ್ವಾನ!; ಬಿಜೆಪಿ ಶಾಸಕನ ವಿರುದ್ಧ ಕಣಕ್ಕಿಳಿವರೇ ಭವಾನಿ? ಜಿಲ್ಲೆಯ ಮಟ್ಟಿಗೆ ಎಚ್.ಡಿ. ರೇವಣ್ಣ ನಿರ್ಧಾರವೇ ನಿರ್ಣಾಯಕ

Webdesk - Ravikanth

| ಎ.ಆರ್. ವೆಂಕಟೇಶ್ ಹಾಸನ

ಜೆಡಿಎಸ್​ನ ಭದ್ರಕೋಟೆಯೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತವರು ಜಿಲ್ಲೆಯ ಹಾಸನ ವಿಧಾನಸಭಾ ಕ್ಷೇತ್ರದಿಂದ ಕಳೆದ (2018ರ) ಚುನಾವಣೆಯಲ್ಲಿ ಗೆದ್ದು ಬಿಜೆಪಿ ಬಾವುಟ ಹಾರಿಸಿದ ಪ್ರೀತಮ್ ಜೆ. ಗೌಡ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಗುರುತಿಸಲ್ಪಡುವ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಜಿಲ್ಲೆಯ ಮಟ್ಟಿಗೆ ಜೆಡಿಎಸ್​ನ ಹೈಕಮಾಂಡ್ ಆಗಿರುವ ಎಚ್.ಡಿ. ರೇವಣ್ಣ ಮತ್ತವರ ಕುಟುಂಬವನ್ನು ಎದುರು ಹಾಕಿಕೊಂಡಿದ್ದೇ ಪ್ರೀತಮ್ ಪ್ರಸಿದ್ಧಿಗೆ ಬರಲು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

1999ರಲ್ಲಿ ಒಮ್ಮೆ ಕೆ.ಎಚ್.ಹನುಮೇಗೌಡರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರಾದರೂ ಅದು ಅವರ ವೈಯಕ್ತಿಕ ವಿಜಯವಾಗಿತ್ತೇ ಹೊರತು ಪಕ್ಷದ ಗೆಲುವಾಗಿರಲಿಲ್ಲ. ಆದರೆ, ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ನಂತರ ನಡೆದ ಚುನಾವಣೆಗಳಲ್ಲಿ ಸತತ ಮೂರು ಬಾರಿ ಎಚ್.ಎಸ್. ಪ್ರಕಾಶ್ ಜೆಡಿಎಸ್​ನಿಂದ ಜಯ ಸಾಧಿಸಿ ಕ್ಷೇತ್ರವನ್ನು ಪಕ್ಷದ ಭದ್ರಕೋಟೆ ಆಗಿಸಿದ್ದರು. ಈ ನಡುವೆ, ಕಸ ಸಂಗ್ರಹಣೆ, ಟ್ಯಾಂಕರ್​ಗಳಲ್ಲಿ ನೀರು ಸರಬರಾಜು ಮಾಡಿ ಮತದಾರರ ಮನ ಗೆಲ್ಲುವುದರ ಜತೆಗೆ, ಕ್ಷೇತ್ರದಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ಕಾರ್ಯಕರ್ತರ ಪಡೆ ಕಟ್ಟಲು ಶ್ರಮಿಸುತ್ತಿದ್ದ ಪ್ರೀತಮ್ 2018ರಲ್ಲಿ ಜೆಡಿಎಸ್ ಭದ್ರಕೋಟೆ ಒಡೆಯವಲ್ಲಿ ಯಶಸ್ವಿಯಾದರು.

ಆರಂಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಆಗಿದ್ದರಿಂದ ಒಂದು ವರ್ಷ ಕಾಲ ಹಿನ್ನಡೆ ಅನುಭವಿಸಿದ್ದ ಪ್ರೀತಮ್ ಗೌಡ, ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಆಗಿದ್ದೇ ತಡ ಶರವೇಗದ ಬೆಳವಣಿಗೆ ಕಾಣಲಾರಂಭಿಸಿದರು. ಬಿಜೆಪಿ ಸರ್ಕಾರ ರಚನೆಯಲ್ಲಿ ಬಿ.ವೈ.ವಿಜಯೇಂದ್ರ ಅವರೊಂದಿಗೆ ಕೈಜೋಡಿಸಿದ್ದ ಪ್ರೀತಮ್ ಗೌಡ, ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ ತಂದಿದ್ದಾರೆ.

ಮೂರನೇ ಸ್ಥಾನದಲ್ಲಿ ಕಾಂಗ್ರೆಸ್: ಕಳೆದ ಚುನಾವಣೆವರೆಗೂ ಜೆಡಿಎಸ್​ನೊಂದಿಗೆ ಸಮಬಲದ ಹೊರಾಟ ನಡೆಸುತ್ತಿದ್ದ ಕಾಂಗ್ರೆಸ್, ಪ್ರೀತಮ್ ಗೌಡರ ಆಗಮನದ ನಂತರ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಗ್ರಾಮೀಣ ಭಾಗದ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೆ ಪ್ರೀತಮ್ ಗೌಡರ ಪಡೆ ಸೇರಿಕೊಂಡಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಎಚ್.ಕೆ. ಮಹೇಶ್ ಜತೆಗೆ ಬಾಗೂರು ಮಂಜೇಗೌಡ, ಬಿ.ಕೆ. ರಂಗಸ್ವಾಮಿ, ಬನವಾಸೆ ರಂಗಸ್ವಾಮಿ, ಕೆ.ಟಿ. ಗಿರೀಶ್, ದಿನೇಶ್ ಮತ್ತಿತರರು ಈ ಬಾರಿ ಕಾಂಗ್ರೆಸ್ ಟಿಕೆಟ್​ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.

ದಾಸಗೌಡ ಮುಳ್ಳುಗೌಡ: ಹಾಸನ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 14 ಚುನಾವಣೆಗಳಲ್ಲಿ ಒಮ್ಮೆ ಪಕ್ಷೇತರ, ಒಮ್ಮೆ ಸ್ವತಂತ್ರ ಪಕ್ಷ, ನಾಲ್ಕು ಬಾರಿ ಕಾಂಗ್ರೆಸ್, ಎರಡು ಬಾರಿ ಜನತಾ ಪಕ್ಷ, ಎರಡು ಬಾರಿ ಬಿಜೆಪಿ ಮತ್ತು ನಾಲ್ಕು ಬಾರಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಅಧಿಕ ಸಂಖ್ಯೆಯಲ್ಲಿದ್ದರೂ ಅವರಲ್ಲಿರುವ ದಾಸಗೌಡ ಮತ್ತು ಮುಳ್ಳುಗೌಡ ಎಂಬ ಒಳಪಂಗಡಗಳ ನಡುವಿನ ತಿಕ್ಕಾಟಕ್ಕೆ ಹಲವು ದಶಕಗಳ ಇತಿಹಾಸವಿದೆ. ಇದುವರೆಗೆ ಶಾಸಕರಾಗಿದ್ದವರಲ್ಲಿ ಸ್ವತಂತ್ರ ಪಕ್ಷದಿಂದ ಗೆದ್ದಿದ್ದ ಜೈನ ಸಮುದಾಯದ ಎಚ್.ಬಿ. ಜ್ವಾಲನಯ್ಯ ಮತ್ತು ಜನತಾ ಪಕ್ಷದಿಂದ ಗೆದ್ದಿದ್ದ ಒಕ್ಕಲಿಗ ಮುಳ್ಳುಗೌಡ ಉಪ ಪಂಗಡದ ಬಿ.ವಿ. ಕರೀಗೌಡ ಹೊರತುಪಡಿಸಿದರೆ ಉಳಿದವರೆಲ್ಲರೂ ದಾಸಗೌಡ ಉಪ ಪಂಗಡಕ್ಕೆ ಸೇರಿದವರೇ ಆಗಿದ್ದಾರೆ. ಅಷ್ಟರಮಟ್ಟಿಗೆ ಈ ಕ್ಷೇತ್ರದ ಚುನಾವಣೆಯಲ್ಲಿ ಒಕ್ಕಲಿಗರ ಒಂದು ಉಪ ಪಂಗಡ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿದೆ.
ಜೆಡಿಎಸ್ ಕಲಿ ಯಾರು?: ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಪುತ್ರ ಎಚ್.ಪಿ. ಸ್ವರೂಪ್​ಗೆ ನೇತೃತ್ವದ ಶಕ್ತಿ ಇದ್ದರೂ ಆಕ್ರಮಣಕಾರಿ ನಡೆ ಕಂಡುಬರುತ್ತಿಲ್ಲ. ‘ರೇವಣ್ಣ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ. 50 ಸಾವಿರ ಮತಗಳ ಅಂತರದಿಂದ ಅವರ ವಿರುದ್ಧ ಗೆಲುವು ಸಾಧಿಸುತ್ತೇನೆ. ಒಂದು ವೇಳೆ 50 ಸಾವಿರ ಮತಗಳಿಗಿಂತ ಕಡಿಮೆ ಅಂತರದಲ್ಲಿ ನಾನು ಗೆದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆಗೆ ಹೋಗುತ್ತೇನೆ’ ಎಂಬುದಾಗಿ ಪ್ರೀತಮ್ ಪಂಥಾಹ್ವಾನ ನೀಡಿ ರೇವಣ್ಣ ಅವರನ್ನು ಕೆಣಕಿರುವುದರಿಂದ ಜೆಡಿಎಸ್ ಅಭ್ಯರ್ಥಿ ಯಾರೆಂಬ ಕುತೂಹಲ ಹೆಚ್ಚಿದೆ.

ಭವಾನಿ ರೇವಣ್ಣ ಬರುವರೇ?: ಎಚ್.ಡಿ. ರೇವಣ್ಣ ಅವರ ಪತ್ನಿ, ಜಿಪಂ ಮಾಜಿ ಸದಸ್ಯೆ ಭವಾನಿ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸುತ್ತಿರುವುದು ಅವರ ಚುಟುವಟಿಕೆಗಳಿಂದಲೇ ತಿಳಿದುಬರುತ್ತಿದೆ. ಸುರಕ್ಷಿತವಾಗಿರುವ ಹೊಳೆನರಸೀಪುರ ಕ್ಷೇತ್ರವನ್ನು ಭವಾನಿ ಅವರಿಗೆ ಬಿಟ್ಟುಕೊಟ್ಟು ಎಚ್.ಡಿ. ರೇವಣ್ಣ ಅವರೇ ಹಾಸನ ಕ್ಷೇತ್ರಕ್ಕೆ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದ್ದವು. ಆದರೆ, ಮುಂದೆ ಸಮ್ಮಿಶ್ರ ಸರ್ಕಾರ ರಚನೆ ಆಗುವ ಸಾಧ್ಯತೆ ಇರುವುದರಿಂದ ರಿಸ್ಕ್ ತೆಗೆದುಕೊಳ್ಳುವ ಬದಲು ಹೊಳೆನರಸೀಪುರ ಕ್ಷೇತ್ರದಲ್ಲೇ ಸ್ಪರ್ಧಿಸುವುದು ಉತ್ತಮ. ಸ್ಪರ್ಧೆಗೆ ಪಟ್ಟು ಹಿಡಿದಿರುವ ಭವಾನಿ ಅವರನ್ನು ಹಾಸನ ಕ್ಷೇತ್ರದಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ಮಾಡುವುದು ಒಳ್ಳೆಯದು ಎಂಬ ನಿಲುವಿಗೆ ರೇವಣ್ಣ ಕುಟುಂಬ ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ ಹಾಸನ ಕ್ಷೇತ್ರದ ಚುನಾವಣೆ ಇಡೀ ರಾಜ್ಯದ ಗಮನ ಸೆಳೆಯಲಿದೆ.