ಭತ್ತದ ನಾಡು-ಬರದ ಬೀಡು ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಇತರ ಪಕ್ಷದವರನ್ನು ಸೋಲಿಸುವುದಕ್ಕಷ್ಟೇ ಜೆಡಿಎಸ್ ಸೀಮಿತವಾಗಿದೆ. ಐದು ವಿಧಾನಸಭಾ ಕ್ಷೇತ್ರ ಹೊಂದಿರುವ ಜಿಲ್ಲೆಯಲ್ಲಿ ಮೂರರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕಳೆದ ಬಾರಿ ಕಳೆದುಕೊಂಡ ಕ್ಷೇತ್ರಗಳ ಮರಳಿ ಪಡೆಯಲು ಕೈ ನಾಯಕರು ಹವಣಿಸುತ್ತಿದ್ದಾರೆ. ಇತ್ತ ಕಮಲ ನಾಯಕರು ಗೆಲುವಿನ ನಾಗಾಲೋಟ ಮುಂದುವರಿಸಲು ತವಕಿಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ ಸಾಧ್ಯತೆಯಿದ್ದು, ಜೆಡಿಎಸ್ ಪ್ರಮುಖ ಪಾತ್ರ ವಹಿಸುವ ಲಕ್ಷಣ ದಟ್ಟವಾಗುತ್ತಿವೆ. ಸದ್ಯ ಅಧಿಕಾರದಲ್ಲಿರುವ ಕೈ-ಕಮಲ ಶಾಸಕರ ವಿರುದ್ಧ ಅವರವರ ಕ್ಷೇತ್ರದಲ್ಲಿ ಅಸಮಾಧಾನ ಮಡುಗಟ್ಟಿದ್ದು, ಚುನಾವಣೆ ಮೇಲೆ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ನಾಲ್ಕು ಕ್ಷೇತ್ರಗಳಲ್ಲಿ ನೀರಾವರಿಯೇ ಪ್ರಮುಖ ರಾಜಕೀಯ ದಾಳವಾಗಿದ್ದು, ಗಂಗಾವತಿಯಲ್ಲಿ ಹಿಂದುತ್ವ ತಂತ್ರ ಫಲಿಸುತ್ತಿದೆ.
ಹಿಟ್ನಾಳ್ ವಿರುದ್ಧ ಕರಡಿ ಕುಣಿತ
ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರದಲ್ಲಿ ಸತತ ಎರಡು ಅವಧಿಯಿಂದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಬಿಗಿ ಹಿಡಿತ ಸಾಧಿಸಿದ್ದು, ಸದ್ಯ ಹ್ಯಾಟ್ರಿಕ್ ತವಕದಲ್ಲಿದ್ದಾರೆ. ಆದರೆ, ಆಡಳಿತ ವಿರೋಧಿ ಅಲೆ ಬಹುವಾಗಿ ಕಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯವೂ ಮುನಿಸಿಕೊಂಡಿದ್ದು ಗೆಲುವು ಸುಲಭವಿಲ್ಲ. ಕ್ಷೇತ್ರದ ಇತಿಹಾಸದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಾಗಿಲ್ಲ. ಹಿಟ್ನಾಳ್ ವಿರುದ್ಧ ಕಾದಾಟಕ್ಕೆ ಸಂಸದ ಸಂಗಣ್ಣ ಕರಡಿ ಸಾಟಿ ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ವಯೋಮಿತಿ ಕಾರಣ ಟಿಕೆಟ್ ಸಿಗುವುದು ಅನುಮಾನ. ಕಳೆದ ಬಾರಿ ಬಿಜೆಪಿಯಿಂದ ಸಿ.ವಿ.ಚಂದ್ರಶೇಖರ್ಗೆ ಬಿಜೆಪಿ ಟಿಕೆಟ್ ಘೊಷಿಸಿತ್ತು. ಪಟ್ಟು ಬಿಡದ ಸಂಗಣ್ಣ, ಟಿಕೆಟ್ ಬದಲಾಯಿಸಿ ಪುತ್ರ ಅಮರೇಶ ಕರಡಿಯನ್ನು ಕೊನೇ ಗಳಿಗೆಯಲ್ಲಿ ಕಣಕ್ಕಿಳಿಸಿದ್ದರು. 2018ರಲ್ಲಿ ಟಿಕೆಟ್ ಸಿಕ್ಕರೂ ಸ್ಪರ್ಧೆಯಿಂದ ವಂಚಿತ ಸಿ.ವಿ.ಚಂದ್ರಶೇಖರ್ ಈ ಬಾರಿ ಕಣಕ್ಕಿಳಿಯಲು ಟೊಂಕ ಕಟಿದ್ದಾರೆ. ಕ್ಷೇತ್ರದಲ್ಲಿ ಪ್ರಬಲ ಹಿಡಿತ ಹೊಂದಿರುವ ಕರಡಿ ಸುಲಭಕ್ಕೆ ಇನ್ನೊಬ್ಬರಿಗೆ ಟಿಕೆಟ್ ಬಿಟ್ಟುಕೊಡುವ ಲಕ್ಷಣಗಳಿಲ್ಲ. ಹೀಗಾಗಿ ಕ್ಷೇತ್ರ ಕೌತುಕದ ತಾಣವಾಗಿದೆ. ಟಿಕೆಟ್ ವಂಚಿತರು ಅನ್ಯ ಪಕ್ಷಕ್ಕೆ ಜಿಗಿಯಲಿದ್ದು, ತ್ರಿಕೋನ ಸ್ಪರ್ಧೆ ಸಾಧ್ಯತೆಯಿದೆ.
ಕನಕರಾಯನ ಕೃಪೆಗಾಗಿ ಕಾದಾಟ
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕನಕಗಿರಿಯಲ್ಲಿ ಈ ಬಾರಿ ಕ್ಷೇತ್ರಾಧಿಪತಿ ಕನಕರಾಯ ಯಾರಿಗೆ ಆಶೀರ್ವಾದ ಮಾಡಲಿದ್ದಾನೆಂಬ ಪ್ರಶ್ನೆ ಹುಟ್ಟುಹಾಕಿದೆ. ಕಳೆದ ಬಾರಿ ಅನುಕಂಪದ ಅಲೆಯಲ್ಲಿ ಸುಲಭ ದಡ ಸೇರಿರುವ ಶಾಸಕ ಬಸವರಾಜ ದಢೇಸುಗೂರು ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸುವಲ್ಲಿ ಪದೇಪದೆ ಎಡವುತ್ತಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರವೂ ಶಾಸಕರ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿಲ್ಲ. ಪರಿಣಾಮ ಅಭ್ಯರ್ಥಿ ಬದಲಾವಣೆ ಕೂಗು ಬಲವಾಗಿ ಕೇಳಿಬರುತ್ತಿದೆ. ಪೊಲೀಸ್ ಅಧಿಕಾರಿ ಉದಯ ರವಿ, ಗಾಯತ್ರಿ ತಿಮ್ಮಾರಡ್ಡಿ, ಈಶಪ್ಪ ಮಾದಿನೂರು ಕಮಲ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಬಾರಿ ಮಾಡಿದ ತಪ್ಪಿಗೆ ದಂಡ ತೆತ್ತಿರುವ ಮಾಜಿ ಸಚಿವ ಕಾಂಗ್ರೆಸ್ನ ಶಿವರಾಜ ತಂಗಡಗಿ ಶಾಸಕ ದಢೇಸುಗೂರು ವಿಫಲತೆಗಳೇ ವರವಾಗಲಿವೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡು ಪ್ರಬಲ ಪೈಪೋಟಿಗೆ ಸಿದ್ಧರಾಗಿದ್ದಾರೆ.
ನೀರಾವರಿಗಾಗಿ ರಡ್ಡಿಗಳ ಕಾಳಗ
ಸಚಿವ ಹಾಲಪ್ಪ ಆಚಾರ್ ಪ್ರತಿನಿಧಿಸುವ ಯಲಬುರ್ಗಾ ಕ್ಷೇತ್ರದಲ್ಲಿ ನೀರಾವರಿಯೇ ಕೈ-ಕಮಲ ಪಾಳಯದ ಮುಖ್ಯ ಅಸ್ತ್ರ. ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಕಮಲ ಅರಳಿಸಿದ್ದಾರೆ. ಸ್ವಯಂಕೃತ ತಪ್ಪಿನಿಂದ ಕ್ಷೇತ್ರ ಕಳೆದುಕೊಂಡ ಮಾಜಿ ಸಚಿವ ಕಾಂಗ್ರೆಸ್ನ ಬಸವರಾಜ ರಾಯರಡ್ಡಿ, ಆಚಾರ್ಗೆ ಟಾಂಗ್ ನೀಡಿ ಕೈ ಪಾರುಪತ್ಯ ಮುಂದುವರಿಸಲು ಹವಣಿಸುತ್ತಿದ್ದಾರೆ. ಮೊದಲ ಗೆಲುವಿನಲ್ಲೇ ಪ್ರಭಾವ ಬಳಸಿ ಮಂತ್ರಿಗಿರಿ ಗಿಟ್ಟಿಸಿರುವ ಆಚಾರ್ ಎರಡನೇ ಬಾರಿಗೆ ರಾಯರಡ್ಡಿಯೊಂದಿಗೆ ಕಾದಾಟಕ್ಕೆ ವೇದಿಕೆ ಸಜ್ಜುಗೊಳಿಸಿಕೊಂಡಿದ್ದಾರೆ. ಇತ್ತ ಯುವ ಮುಖಂಡ ನವೀನ್ ಗುಳಗಣ್ಣನವರ್ ಹಾಗೂ ಆಚಾರ್ರೊಂದಿಗೆ ವಿರೋಧ ಕಟ್ಟಿಕೊಂಡು ಸರ್ಕಾರಿ ನೌಕರಿಗೆ ಗುಡ್ಬೈ ಹೇಳಿರುವ ಗುಂಗಾಡಿ ಶರಣಪ್ಪ ಕಮಲ ಟಿಕೆಟ್ಗೆ ಲಾಬಿ ನಡೆಸಿದ್ದಾರೆ. ಕಳೆದ ಬಾರಿ ರಡ್ಡಿ ‘ಕೈ’ ಬಿಟ್ಟವರು ಈ ಬಾರಿ ಯಾರೊಂದಿಗೆ ಕೈ ಜೋಡಿಸಲಿದ್ದಾರೆಂಬುದರ ಮೇಲೆ 2023ರ ಫಲಿತಾಂಶ ನಿರ್ಧಾರವಾಗಲಿದೆ.
ಅಂಜನಿ ಪುತ್ರನ ಕರುಣೆ ಇದ್ದವರದ್ದೇ ಇಲ್ಲಿ ಗೆಲುವು
ಭತ್ತದ ನಗರಿ ಗಂಗಾವತಿಯಲ್ಲಿ ಮಾಜಿ ಸಚಿವ ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿಗೆ ಸೋಲುಣಿಸಿರುವ ಶಾಸಕ ಪರಣ್ಣ ಮುನವಳ್ಳಿ ಈ ಬಾರಿಯೂ ಗೆಲುವಿಗೆ ಹಿಂದುತ್ವ ಮಂತ್ರ ಪಠಿಸುತ್ತಿದ್ದಾರೆ. ವೈಯಕ್ತಿಕ ವರ್ಚಸ್ಸಿಗಿಂತ ಆಂಜನೇಯ ಜನಿಸಿದ ಅಂಜನಾದ್ರಿ ಅಭಿವೃದ್ಧಿ ಮಂತ್ರ ಜಪದ ಬೆನ್ನು ಬಿದ್ದಿದ್ದಾರೆ. ಎಚ್.ಆರ್.ಚನ್ನಕೇಶವ ಸಹ ಬಿಜೆಪಿ ಟಿಕೆಟ್ಗೆ ಲಾಬಿ ನಡೆಸಿದ್ದಾರೆ. ಮತದಾರನ ಮೇಲೆ ‘ಅಂಜನಿ ಪುತ್ರ’ ಪ್ರಭಾವ ಬೀರುವ ಕಾರಣ ಕೈ ಪಾಳಯದವರೂ ಹಿಂದುತ್ವ ಮಂತ್ರ ಪಠಣ ಮಾಡುವಂತಾಗಿದೆ. ಕೆಲ ಕೈ ನಾಯಕರು ಕಾಂಗ್ರೆಸ್ನಿಂದ ಹಿಂದುಗಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಳೆದ ಬಾರಿ ’ಕೈ’ ಬಿಟ್ಟು ‘ತೆನೆ’ ಹೊತ್ತಿದ್ದ ಮಾಜಿ ಸಂಸದ ಎಚ್.ಜಿ.ರಾಮುಲು ಪುತ್ರ ಎಚ್.ಆರ್.ಶ್ರೀನಾಥ ಮತ್ತೆ ಕಾಂಗ್ರೆಸ್ ಸೇರಿದ್ದು, ಅನ್ಸಾರಿಗೆ ಮುಳುವಾಗಿ ಪರಿಣಮಿಸಲಿದೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮೆಗೌಡ ಕೈ ಟಿಕೆಟ್ ಆಕಾಂಕ್ಷಿಗಳು ರೇಸ್ನಲ್ಲಿದ್ದಾರೆ.
ಕುಷ್ಟಗಿಯಲ್ಲಿ ಪಾಟೀಲರ ಹಣಾಹಣಿ
ಬರ ಪೀಡಿತ ಕ್ಷೇತ್ರ ಕುಷ್ಟಗಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಸೋಲು-ಗೆಲುವು ಹಾವು ಏಣಿ ಆಟದಂತಿದೆ. ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ. ಕ್ಷೇತ್ರದಲ್ಲಿ ಈವರೆಗೆ ಯಾರೂ ಸತತ ಎರಡು ಬಾರಿ ಗೆದ್ದಿಲ್ಲ. ಈ ಬಾರಿಯೂ ಇತಿಹಾಸ ಮರುಕಳಿಸುವುದೇ ಎಂಬ ಸಹಜ ಕುತೂಹಲ ಕೆರಳಿಸಿದೆ. ಜನರೊಂದಿಗೆ ನಿತ್ಯ ಸಂಪರ್ಕದಲ್ಲಿರುವ ಶಾಸಕ ಕಾಂಗ್ರೆಸ್ನ ಅಮರೇಗೌಡ ಪಾಟೀಲ ಬಯ್ಯಾಪುರ ಹೊಸ ಇತಿಹಾಸ ಸೃಷ್ಟಿಯ ಹುಮ್ಮಸ್ಸಿನಲ್ಲಿದ್ದಾರೆ. ಬಯ್ಯಾಪುರಗೆ ಸೋಲಿನ ರುಚಿ ತೋರಿಸಲು ಮಾಜಿ ಶಾಸಕ ಬಿಜೆಪಿಯ ದೊಡ್ಡನಗೌಡ ಪಾಟೀಲ್ ಚುನಾವಣಾ ಕದನಕ್ಕೆ ಸಜ್ಜಾಗಿದ್ದಾರೆ. ಬಹಿರಂಗವಾಗಿ ಟಿಕೆಟ್ ಕೇಳದಿದ್ದರೂ ಬಿ.ವೈ.ವಿಜಯೇಂದ್ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶರಣು ತಳ್ಳಿಕೇರಿ ಕ್ಷೇತ್ರದಲ್ಲಿ ವರ್ಚಸ್ಸು ಹೊಂದಿದ್ದಾರೆ.