| ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಬಹುದೆಂಬ ಕಾರಣಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದೆಂಬಂತೆ ಸದ್ದು ಮಾಡುತ್ತಿದೆ. ಅಹಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಹಾಗೂ ಈ ಹಿಂದೆ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿರುವುದು ಸಿದ್ದರಾಮಯ್ಯ ಸ್ಪರ್ಧೆಗೆ ಒಲವು ತೋರಲು ಪ್ರಮುಖ ಕಾರಣವಾಗಿದೆ. ಇದರ ನಡುವೆ ಇಲ್ಲಿನ ಬಣ ಬಡಿದಾಟಕ್ಕೆ ಬೇಸತ್ತು ಅವರು ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆಂಬ ಕೂಗು ಎದ್ದಿದೆ. ಆದರೆ ಇದೆಲ್ಲ ಊಹಾಪೋಹ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಬಣ ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಇನ್ನು ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನಮಗೇ ಟಿಕೆಟ್ ಕೊಡಿ ಎಂದು ಅರ್ಧ ಡಜನ್ ಆಕಾಂಕ್ಷಿಗಳು ಲಾಬಿಗೆ ಇಳಿದಿದ್ದಾರೆ.
ಕ್ಷೇತ್ರದಲ್ಲಿ 14 ವರ್ಷದಿಂದ ಕಾಂಗ್ರೆಸ್ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಕಳೆದೆರಡು ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ವರ್ಕೌಟ್ ಆಗಲಿಲ್ಲ. ಇನ್ನು ಭಿನ್ನಮತದ ಜತೆ ವಿರೋಧಿಗಳೆಲ್ಲ ಒಗ್ಗೂಡಿ ಚಕ್ರವ್ಯೂಹ ಹೆಣೆದಿರುವ ಪ್ರಸಕ್ತ ಸನ್ನಿವೇಶದಲ್ಲಿ ಯಾರೇ ಸ್ಪರ್ಧಿಸಿದರೂ ಕೈ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸದಿದ್ದರೆ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಬದಲಿಗೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸ್ಪರ್ಧೆಗಿಳಿಸಲು ರಮೇಶ್ಕುಮಾರ್ ಬಣ ಮುಂದಾಗಿದೆ. ಬಣ ರಾಜಕೀಯದಿಂದ ದೂರವಿರುವ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೆ.ಎಚ್.ಮುನಿಯಪ್ಪ ಬಣದ ಊರುಬಾಗಿಲು ಶ್ರೀನಿವಾಸ್, ಎ.ಶ್ರೀನಿವಾಸ್, ಎಲ್.ಎ.ಮಂಜುನಾಥ್ ಇತರರೂ ಅರ್ಜಿ ಸಲ್ಲಿಸಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಗೋವಿಂದಗೌಡರಿಗೆ ಟಿಕೆಟ್ ಸಿಕ್ಕರೆ ಕಾಂಗ್ರೆಸ್ ಪ್ರಬಲವಾಗಬಹುದೆಂಬ ಮಾತುಗಳು ಇವೆ.
ಕೋಲಾರದಲ್ಲಿ 1.72 ಲಕ್ಷ ಅಹಿಂದ, 54 ಸಾವಿರ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಮತಗಳಿವೆ. ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದು, ಈ ಮತಗಳು ವಿಭಜನೆಯಾಗುವುದಿಲ್ಲ. ಕೆ.ಸಿ.ರೆಡ್ಡಿ ನಂತರ ‘ಮುಖ್ಯಮಂತ್ರಿ ಭಾಗ್ಯ’ ಜಿಲ್ಲೆಗೆ ಒಲಿಯಬಹುದೆಂಬ ಕಾರಣಕ್ಕೆ ಒಕ್ಕಲಿಗ ಮತ್ತು ಮೇಲ್ವರ್ಗದವರ ಮತಗಳೂ ‘ಕೈ’ಗೆ ಕ್ರೋಡೀಕರಣಗೊಳ್ಳುತ್ತವೆ ಎಂಬುದು ಕೈ ಲೆಕ್ಕಾಚಾರ. ಸ್ಪರ್ಧಿಸುವ ಕ್ಷೇತ್ರ ಯಾವುದೆಂದು ಸಿದ್ದರಾಮಯ್ಯ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ನ.13ರಂದು ಕೋಲಾರ ಕ್ಷೇತ್ರ ಪರ್ಯಟನೆ ಮಾಡಿ ಜನರ ನಾಡಿಮಿಡಿತ ಅರಿತು ತೆರಳಿದ್ದಾರೆ. ಇದರ ಬೆನ್ನಲ್ಲೇ ನ.18ಕ್ಕೆ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿ ಗ್ರಾಮವಾಸ್ತವ್ಯ ನಡೆಸಿ ಹೋಗಿದ್ದಾರೆ. ದಳ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪ್ರಚಾರ ನಡೆಸುತ್ತಿದ್ದಾರೆ. ಒಕ್ಕಲಿಗರ ಮತಗಳು ಸಾರಾಸಗಟಾಗಿ ಜೆಡಿಎಸ್ಗೆ ಹರಿದುಬರಲಿದೆ ಎಂಬ ಲೆಕ್ಕಾಚಾರದಲ್ಲಿ ಮುಸ್ಲಿಂ ಮತ್ತು ಅಹಿಂದ ಮತಬುಟ್ಟಿಗೆ ಕೈಹಾಕಿದ್ದಾರೆ. 2018ರಲ್ಲಿ ಮುಸ್ಲಿಂ ಮತಗಳು ಕೈತಪ್ಪಿದರೂ ಜೆಡಿಎಸ್ ಗೆಲುವಿನ ಅಂತರ 43,135 ಮತಗಳಾಗಿದ್ದು, ಈ ಬಾರಿ ಎದುರಾಳಿ ಯಾರೇ ಆದರೂ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ.
ವರ್ತೂರು ದರ್ಬಾರು!: ಅಹಿಂದ ಸಮಾವೇಶದ ಮೂಲಕ 2008ರ ಚುನಾವಣೆಗೆ ವರ್ತರು ಆರ್. ಪ್ರಕಾಶ್ ಧುಮುಕಿದರು. ಅವರು ಎಚ್.ವಿಶ್ವನಾಥ್ ಮತ್ತು ಎಚ್.ಎಂ. ರೇವಣ್ಣ. ಆ ನಂತರ ಸಿದ್ದರಾಮಯ್ಯರಿಗೆ ಆತ್ಮೀಯರಾದರು. ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ವರ್ತರು ಈಗ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವರ್ತರು, ಮೂರು ಬಾರಿ ಶಾಸಕರಾಗಿದ್ದ ಕೆ.ಶ್ರೀನಿವಾಸಗೌಡರನ್ನು ಸೋಲಿಸಿದ್ದರು. ಬಿಜೆಪಿ ಸರ್ಕಾರ ಬೆಂಬಲಿಸಿ ಸಚಿವರೂ ಆಗಿದ್ದರು. ಆಗ ಸಿದ್ದರಾಮಯ್ಯ ಶ್ರೀರಕ್ಷೆ ಮತ್ತು ಕೆ.ಎಚ್.ಮುನಿಯಪ್ಪ ಬಣದ ಬೆಂಬಲ ಸಿಕ್ಕಿತ್ತು. ಪ್ರಸ್ತುತ ಬಿಜೆಪಿಯಲ್ಲಿರುವ ವರ್ತರು ಕಾಂಗ್ರೆಸ್, ಜೆಡಿಎಸ್ಗೆ ಸೆಡ್ಡು ಹೊಡೆದು ಪಕ್ಷ ಸಂಘಟನೆ ಜತೆಗೆ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಆದರೆ ಅವರಿಗೆ ಕ್ಷೇತ್ರ ಸುಲಭವಿಲ್ಲ.
ಕೈ ಸೋಲಿಸಲು ಚಕ್ರವ್ಯೂಹ: ಕೋಲಾರದಲ್ಲಿ ಸಿದ್ದರಾಮಯ್ಯ ಮತ್ತು ಹಾಲಿ ಶಾಸಕರಾದ ಶ್ರೀನಿವಾಸಪುರದ ಕೆ.ಆರ್.ರಮೇಶ್ಕುಮಾರ್, ಮಾಲೂರಿನ ಕೆ.ವೈ.ನಂಜೇಗೌಡ, ಬಂಗಾರಪೇಟೆಯ ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದದ ಮೂಲಕ ಒಗ್ಗೂಡಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ, ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ನಡುವೆ ಉತ್ತಮ ಬಾಂಧವ್ಯವಿದೆ. ಇವರೆಲ್ಲರ ರಾಜಕೀಯ ವೈರತ್ವ ರಮೇಶ್ಕುಮಾರ್ ಮೇಲಿದ್ದು, ಈ ಸೇಡಿನ ಕಿಡಿ ಜಿಲ್ಲೆಯಲ್ಲಿನ ಫಲಿತಾಂಶ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಹೇಳಲಾಗದು.
ಬಿಜೆಪಿ: ವರ್ತರು ಪ್ರಕಾಶ್ ಮತ್ತು ಬೆಂಬಲಿಗರು ಕ್ಷೇತ್ರದಾದ್ಯಂತ ಸಭೆ, ಸಮಾರಂಭಗಳನ್ನು ನಡೆಸಿದ್ದಾರೆ. ಅನ್ಯ ಪಕ್ಷದ ಮುಖಂಡರನ್ನು ಸೆಳೆಯಲು ಯತ್ನಿಸಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್: ಸಿದ್ದರಾಮಯ್ಯ ಕ್ಷೇತ್ರದ ದೇವಾಲಯ, ಚರ್ಚ್, ಮಸೀದಿ ಗಳಿಗೆ ಭೇಟಿ ನೀಡಿದ್ದಾರೆ. ರೋಡ್ ಶೋ ನಡೆಸಿ ಪಕ್ಷದ ಬಲ ಪ್ರದರ್ಶನ ಅವಲೋಕಿಸಿದ್ದಾರೆ.
ಜೆಡಿಎಸ್: ದಳಪತಿಗಳು ಪಂಚರತ್ನ ಯಾತ್ರೆಗೆ ಜಿಲ್ಲೆಯಿಂದಲೇ ಚಾಲನೆ ನೀಡಿ ವಾರಪೂರ್ತಿ ಭರ್ಜರಿ ಸಭೆ, ಸಮಾರಂಭ, ರೋಡ್ಶೋ ನಡೆಸಿ ಹೋಗಿ ದ್ದಾರೆ. ಟಿಕೆಟ್ ಆಕಾಂಕ್ಷಿಗಳು ಒಗ್ಗೂಡಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.
+ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ, ಈ ಹಿಂದೆ ಬ್ರಾಹ್ಮಣ ಕೆ.ಆರ್.ಶ್ರೀನಿವಾಸಯ್ಯ, ಡಿ.ವೆಂಕಟರಾಮಯ್ಯ, ಬಣಜಿಗ ಪಟ್ಟಾಭಿರಾಮನ್, ಮುಸ್ಲಿಂ ನಿಸಾರ್ ಅಹ್ಮದ್ ಸೇರಿ ಹಲವರನ್ನು ಮತದಾರರು ಗೆಲ್ಲಿಸಿದ್ದಾರೆ. ಇದು ಜಾತ್ಯತೀತ ಮನೋಭಾವನೆಗೆ ನಿದರ್ಶನ, ಕಾಂಗ್ರೆಸ್ಗೆ ವರದಾನ
+ ಅಹಿಂದ ಮತಗಳ ಬೆಂಬಲ ದಡ ಸೇರಿಸಬಹುದು
+ ಅಲ್ಪಸಂಖ್ಯಾತರು ಹೆಚ್ಚಿರುವುದರಿಂದ ಧರ್ಮ ಸಂಘರ್ಷ ಇರದೆಂಬ ನಂಬಿಕೆ
+ ಒಕ್ಕಲಿಗರು ಸೇರಿ ಮೇಲ್ವರ್ಗದವರ ಮತ ಗಳಿಸಲು ಶಾಸಕ ಕೃಷ್ಣ ಬೈರೇಗೌಡ ಬೆಂಬಲ
- ಪ್ರಬಲ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿದರೆ ಮತ ವಿಭಜನೆ
- ಕಾಂಗ್ರೆಸ್ ಭಿನ್ನಮತ ಶಮನವಾಗದಿದ್ದರೆ ಮುಳುವಾಗುವ ಸಾಧ್ಯತೆ
- ವಿರೋಧಿಗಳು ರಮೇಶ್ಕುಮಾರ್ಗೆ ತೋಡುವ ಖೆಡ್ಡಾಗೆ ಸಿದ್ದರಾಮಯ್ಯ ಬೀಳಲೂಬಹುದು
- ಜೆಡಿಎಸ್ನಿಂದ ಗೆದ್ದಿದ್ದ ಶಾಸಕ ಕೆ.ಶ್ರೀನಿವಾಸಗೌಡ ‘ಕೈ’ ಹಿಡಿದಿದ್ದರೂ, ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ವಿರೋಧಿಗಳಿಗೆ ಪ್ರಮುಖ ಅಸ್ತ್ರವಾಗಲಿದೆ.