ಜಿಲ್ಲೆ

ಗೌಡರ ತವರು ಹಾಸನದಲ್ಲಿ ಮಗ್ಗುಲು ಬದಲು ಮುನ್ಸೂಚನೆ

Webdesk - Ravikanth
ಹಾಸನ ಜಿಲ್ಲೆಯ ರಾಜಕೀಯ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ಸುತ್ತವೇ ಸುತ್ತುವುದು ವಿಶೇಷ. ಜಿಲ್ಲೆಯಲ್ಲಿ ಪಕ್ಷ ರಾಜಕಾರಣಕ್ಕಿಂತ ಗೌಡರ ಕುಟುಂಬ ವಿರೋಧಿ ರಾಜಕೀಯವೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸ್ತಿತ್ವದ ಮೂಲ ಅಂಶವಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಆರರಲ್ಲಿ ಜೆಡಿಎಸ್ ಶಾಸಕರಿದ್ದರೆ, ಜಿಲ್ಲಾಕೇಂದ್ರ ಹಾಸನದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. 2013ರ ಚುನಾವಣೆಯಲ್ಲಿ ಅರಕಲಗೂಡು ಮತ್ತು ಬೇಲೂರು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್, 2018ರ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅಂತೆಯೆ, ಕಳೆದುಕೊಂಡಿರುವ ಕ್ಷೇತ್ರಗಳನ್ನು ಮರಳಿ ಪಡೆಯಲು ಈ ಬಾರಿ ಬಹಳ ಬೇಗ ತಾಲೀಮು ಆರಂಭಿಸಿದೆ. ಪಕ್ಷಕ್ಕೆ ಜಿಲ್ಲೆಯಲ್ಲಿ ಅಸ್ತಿತ್ವ ಇಲ್ಲದಿದ್ದರೂ ವಲಸೆ ಹೋಗಿದ್ದ ಪ್ರಭಾವಿ ನಾಯಕರ ಕಾರಣದಿಂದ 1999ರ ಚುನಾವಣೆಯಲ್ಲಿ 4 ಕ್ಷೇತ್ರ ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ ಹಾಸನ ಕ್ಷೇತ್ರದ ಜತೆಗೆ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡು ತನ್ನ ನೆಲೆ ವಿಸ್ತರಿಸುವ ಪ್ರಯತ್ನದಲ್ಲಿದೆ. ಮೇಲ್ನೋಟಕ್ಕೆ ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆಯಂತೆ ಕಾಣಿಸಿದರೂ ಸತತವಾಗಿ ಒಂದೇ ಕುಟುಂಬದ ಸದಸ್ಯರು ಎಲ್ಲ ರಾಜಕೀಯ ಅಧಿಕಾರ ಪಡೆಯುತ್ತಿರುವ ಕಾರಣ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚುತ್ತಿರುವುದು ಸುಳ್ಳಲ್ಲ. ಈ ಅಸಮಾಧಾನದ ಲಾಭವನ್ನು ಪ್ರತಿಪಕ್ಷಗಳು ಯಾವ ರೀತಿ ಪಡೆಯಲಿವೆ ಎಂಬುದರ ಮೇಲೆ ಜಿಲ್ಲೆಯ ರಾಜಕಾರಣ ಮಗ್ಗುಲು ಬದಲಿಸುವುದೇ ಎಂಬುದು ನಿರ್ಧಾರವಾಗಲಿದೆ.

| ಎ.ಆರ್. ವೆಂಕಟೇಶ್ ಹಾಸನ

ಎಚ್.ಡಿ. ರೇವಣ್ಣಗಿಲ್ಲ ಪ್ರತಿಸ್ಪರ್ಧಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸತತ ಆರು ಬಾರಿ, ಅವರ ಪುತ್ರ ಎಚ್.ಡಿ. ರೇವಣ್ಣ ಐದನೇ ಬಾರಿ ಪ್ರತಿನಿಧಿಸುತ್ತಿರುವ ಹೊಳೆನರಸೀಪುರ ಕ್ಷೇತ್ರದಲ್ಲಿ ಸದ್ಯಕ್ಕೆ ರೇವಣ್ಣ ಅವರಿಗೆ ಪ್ರತಿಸ್ಪರ್ಧಿಯೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಪ್ರಬಲ ಸ್ಪರ್ಧೆ ಒಡ್ಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ, ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ದೇವೇಗೌಡರ ಬದ್ಧ ರಾಜಕೀಯ ವೈರಿ ಆಗಿದ್ದ ಮಾಜಿ ಸಂಸದ ದಿವಂಗತ ಜಿ. ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಮಹೇಶ್, ಅವರ ಪುತ್ರ ಹಾಗೂ ಜಿಪಂ ಮಾಜಿ ಸದಸ್ಯ ಶ್ರೇಯಸ್ ಪಟೇಲ್ ಹೆಸರು ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಕೇಳಿಬರುತ್ತಿವೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ.

ಪ್ರೀತಂ ಅಬ್ಬರಕ್ಕೆ ಉಳಿದವರು ತತ್ತರ

ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಪ್ರತಿನಿಧಿಸುತ್ತಿರುವ ಹಾಸನ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆದುಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಯತ್ನ ಆರಂಭಿಸಿವೆ. ಈ ಕ್ಷೇತ್ರದಲ್ಲಿರುವ ಒಕ್ಕಲಿಗರ ಉಪ ಪಂಗಡಗಳ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಜೆಡಿಎಸ್​ನಿಂದ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಅವರನ್ನು ಜೆಡಿಎಸ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಎರಡು ಬಾರಿ ಪರಾಭವಗೊಂಡಿರುವ ಎಚ್.ಕೆ. ಮಹೇಶ, ಉದ್ಯಮಿ ಬನವಾಸೆ ರಂಗಸ್ವಾಮಿ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ ಈ ಬಾರಿ ಕಾಂಗ್ರೆಸ್ ಟಿಕೆಟ್​ಗೆ ಪೈಪೋಟಿ ನಡೆಸಿದ್ದಾರೆ. ಆದರೆ ಶಾಸಕ ಪ್ರೀತಂಗೌಡರ ಅಭಿವೃದ್ಧಿ ಮತ್ತು ಹಣದ ಅಬ್ಬರಕ್ಕೆ ಉಳಿದವರು ತತ್ತರಿಸಿರುವಂತೆ ಕಾಣುತ್ತಿದೆ.

ಸಂದಿಗ್ಧತೆಯಲ್ಲಿ ಶಿವಲಿಂಗೇಗೌಡ

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಸತತ ಮೂರನೇ ಬಾರಿಗೆ ಶಾಸಕರಾಗಿರುವ ಕೆ.ಎಂ.ಶಿವಲಿಂಗೇಗೌಡ, ಈ ಬಾರಿ ಪಕ್ಷ ಬದಲಾವಣೆಯ ಸಂದಿಗ್ಧತೆಯಲ್ಲಿ ಸಿಲುಕಿರುವಂತಿದೆ. ಜೆಡಿಎಸ್ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾನಸಿಕವಾಗಿ ಹತ್ತಿರವಾಗಿರುವ ಶಿವಲಿಂಗೇಗೌಡರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಇಡೀ ಕ್ಷೇತ್ರದ ಮತದಾರರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದಲೂ ಅವರಿಗೆ ಆಹ್ವಾನ ಇದೆ ಎನ್ನಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದ ಎನ್.ಆರ್.ಸಂತೋಷ್ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್​ಗೆ ಪ್ರಬಲ ಆಕಾಂಕ್ಷಿಯಾಗಿದ್ದು, ಕಳೆದ ಎರಡು ವರ್ಷಗಳಿಂದಲೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದ ಜಿ. ಮರಿಸ್ವಾಮಿ ಕೂಡ ಮರುಸ್ಪರ್ಧೆ ಬಯಸಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ಜಿ.ಬಿ.ಶಶಿಧರ, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್ ಮತ್ತು ವಿಶಾಲಕುಮಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಭರವಸೆಯಲ್ಲಿ ಬಾಲಣ್ಣ

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಸತತ ಎರಡು ಬಾರಿ ಜಯಗಳಿಸಿರುವ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮುಂದಿನ ಚುನಾವಣೆಯಲ್ಲಿಯೂ ಗೆಲುವಿನ ನಗೆ ಬೀರುವ ಭರವಸೆಯಲ್ಲಿದ್ದಾರೆ. ಎಚ್.ಡಿ.ದೇವೇಗೌಡರ ಕುಟುಂಬದ ಪ್ರಭಾವದಿಂದ ಹೊರಬಂದು ಪಕ್ಷಭೇದ ಮರೆತು ಕೆಲಸ ಮಾಡಿರುವುದು, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿರುವುದು, ಸಹಕಾರ ಸಂಘಗಳು, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆ ಮತ್ತಿತರ ಕಾರ್ಯಗಳು ತಮ್ಮ ಕೈಹಿಡಿಯಲಿವೆ ಎಂಬುದು ಅವರ ವಿಶ್ವಾಸವಾಗಿದೆ. ಇನ್ನು ಕಾಂಗ್ರೆಸ್​ನಿಂದ ಇತ್ತೀಚೆಗೆ ತಾನೆ ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಸಿರುವ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಜತ್ತೇನಹಳ್ಳಿ ರಾಮಚಂದ್ರ, ಮಾಜಿ ಸಚಿವ ದಿವಂಗತ ಎಚ್.ಸಿ. ಶ್ರೀಕಂಠಯ್ಯ ಅವರ ಮೊಮ್ಮಗ ಲಲಿತ್ ರಾಘವ ಮತ್ತು ಮನೋಹರ ಕುಂಭೇನಹಳ್ಳಿ ಟಿಕೆಟ್​ಗೆ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿಯಲು ಅಣತಿ ಆನಂದ್ ಮತ್ತು ಚಿದಾನಂದ ಉತ್ಸುಕರಾಗಿದ್ದಾರೆ.

ಎಚ್.ಕೆ.ಕುಮಾರಸ್ವಾಮಿ ಅದೃಷ್ಟದ ಓಟ

ಬೇಲೂರು ಮೀಸಲು ಕ್ಷೇತ್ರವಾಗಿದ್ದಾಗ ಮೂರು ಬಾರಿ ಪ್ರತಿನಿಧಿಸಿದ್ದ, ಸಕಲೇಶಪುರ ಮೀಸಲು ಕ್ಷೇತ್ರವಾದ ನಂತರ ಅಲ್ಲಿಂದಲೂ ಸತತ ಮೂರು ಬಾರಿ ಆರಿಸಿ ಬಂದಿರುವ ‘ಅದೃಷ್ಟವಂತ ರಾಜಕಾರಣಿ’ ಜೆಡಿಎಸ್​ನ ಎಚ್.ಕೆ.ಕುಮಾರಸ್ವಾಮಿ ಅವರ ಅದೃಷ್ಟ ಈ ಬಾರಿಯೂ ಮುಂದುವರಿಯುವುದೇ ಎಂಬುದು ರಾಜಕೀಯ ವಲಯದ ಆಸಕ್ತಿಕರ ಚರ್ಚೆಯ ವಿಷಯವಾಗಿದೆ. ಸಕಲೇಶಪುರ ಮತ್ತು ಆಲೂರು ತಾಲೂಕು ಹಾಗೂ ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಒಳಗೊಂಡಿರುವ ಈ ವಿಶಾಲ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ನಾರ್ವೆ ಸೋಮಶೇಖರ್ ಪ್ರಬಲ ಸ್ಪರ್ಧೆ ಒಡ್ಡಿದ್ದರೂ 4942 ಮತಗಳ ಸಣ್ಣ ಅಂತರದಿಂದ ಎಚ್​ಕೆಕೆ ಗೆಲುವಿನ ದಡ ಸೇರಿದ್ದರು. ಈ ಬಾರಿಯೂ ಬಿಜೆಪಿ ಟಿಕೆಟ್​ಗಾಗಿ ನಾರ್ವೆ ಸೋಮಶೇಖರ್ ಪ್ರಯತ್ನ ನಡೆಸಿದ್ದಾರೆ. ಜತೆಗೆ, ಸಿಮೆಂಟ್ ಮಂಜು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಪರಾಭವಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಮತ್ತು ಯುವ ಮುಖಂಡ ಮುರಳಿ ಮೋಹನ್ ಸ್ಪರ್ಧೆ ಬಯಸಿದ್ದಾರೆ.

ಅರಕಲಗೂಡಿನಲ್ಲಿ ಕಾಂಗ್ರೆಸ್ ಜ್ವರ

ಪ್ರಸ್ತುತ ಜೆಡಿಎಸ್​ನ ಎ.ಟಿ.ರಾಮಸ್ವಾಮಿ ಪ್ರತಿನಿಧಿಸುತ್ತಿರುವ ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್​ಗಾಗಿ ಹಿಂದೆಂದೂ ಕಾಣದಷ್ಟು ಪೈಪೋಟಿ ಕಂಡುಬರುತ್ತಿದೆ. ಬಿಜೆಪಿ ತೊರೆದಿರುವ ಮಾಜಿ ಶಾಸಕ ಎ.ಮಂಜು ಮತ್ತೆ ಕಾಂಗ್ರೆಸ್​ನಿಂದ ಕಣಕ್ಕಿಳಿಯುವ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಜತೆಗೆ, ಪ್ರಗತಿಪರ ಕೃಷಿಕ ಕೃಷ್ಣೇಗೌಡ, ಮಾಜಿ ಪೊಲೀಸ್ ಅಧಿಕಾರಿ ಶ್ರೀಧರಗೌಡ, ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಮಕ್ಕಳ ವೈದ್ಯ ದಿನೇಶ್ ಭೈರೇಗೌಡ ಮತ್ತು ಶೇಷೇಗೌಡ ಸಹ ಕಾಂಗ್ರೆಸ್ ಟಿಕೆಟ್​ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಸಹ ಕಾಂಗ್ರೆಸ್ ಸೇರುವ ಬಯಕೆ ಹೊಂದಿದ್ದು, ಅವರು ಲೋಕಸಭೆ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯೋಗಾ ರಮೇಶ್ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಎಟಿಆರ್ ಏನಾದರೂ ಜೆಡಿಎಸ್ ತೊರೆದರೆ, ಕಾಂಗ್ರೆಸ್ ಪಟ್ಟಿಯಲ್ಲಿ ಇರುವವರ ಪೈಕಿ ಒಬ್ಬರು ಜೆಡಿಎಸ್ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.

ಬೇಲೂರಿನಲ್ಲಿ ತ್ರಿಕೋನ ಸ್ಪರ್ಧೆ

ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾದ ನಂತರ ಎರಡು ಬಾರಿ ಕಾಂಗ್ರೆಸ್, ಒಮ್ಮೆ ಜೆಡಿಎಸ್ ಶಾಸಕ ಪ್ರತಿನಿಧಿಸಿರುವ ಬೇಲೂರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಕಂಡುಬರುತ್ತಿವೆ. ಹಾಲಿ ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಮತ್ತೆ ಕಣಕ್ಕಿಳಿಯವುದು ಬಹುತೇಕ ಖಚಿತ ಎನ್ನಲಾಗಿದೆ. ಬಿಜೆಪಿಯಿಂದ ಕಳೆದ ಬಾರಿ ಪ್ರಬಲ ಸ್ಪರ್ಧೆಯೊಡ್ಡಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮತ್ತು ಕಾಂಗ್ರೆಸ್​ನಿಂದ ಮಾಜಿ ಸಚಿವ ಬಿ.ಶಿವರಾಮು ಕಣಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಟಿಕೆಟ್​ಗಾಗಿ ಕೊರಟಿಕೆರೆ ಪ್ರಕಾಶ್ ಸಹ ಪೈಪೋಟಿ ನಡೆಸುತ್ತಿದ್ದಾರೆ. ದಿವಂಗತ ಶಾಸಕ ವೈ.ಎನ್.ರುದ್ರೇಶಗೌಡರ ಸಹೋದರ ವೈ.ಎನ್.ಕೃಷ್ಣೇಗೌಡ ಮತ್ತು ಇತ್ತೀಚೆಗೆ ತಾನೆ ಕಾಂಗ್ರೆಸ್ ಸೇರಿರುವ ಉದ್ಯಮಿ ರಾಜಶೇಖರ ಸಹ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ.