ಜಿಲ್ಲೆ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ಎನ್​ಐಎಗೆ ಹಸ್ತಾಂತರ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ತನಿಖೆ ಇದೀಗ ರಾಷ್ಟ್ರೀಯ ತನಿಖಾ ಆಯೋಗ(ಎನ್​ಐಎ)ಕ್ಕೆ ಹಸ್ತಾಂತರಗೊಂಡಿದೆ.

ಪ್ರವೀಣ್​ ನೆಟ್ಟಾರ್ ಕೊಲೆ ಪ್ರಕರಣದ ಮುಂದಿನ ತನಿಖೆಯನ್ನು ಸುಳ್ಯ ಕಿರಿಯ ಸಿವಿಲ್ ನ್ಯಾಯಾಲಯದ ಮೂಲಕ ಕರ್ನಾಟಕ ಪೊಲೀಸರು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಈಗಾಗಲೇ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ.

ಸವಣೂರು ನಿವಾಸಿ ಝಾಕೀರ್, ಬೆಳ್ಳಾರೆ ನಿವಾಸಿ ಮಹಮ್ಮದ್ ಶಾಫೀಕ್, ಶೇಖ್ ಸದ್ದಾಂ ಹುಸೇನ್, ಅಬ್ದುಲ್ ಹ್ಯಾರಿಸ್ ಮೇಲೆ ಆಗಸ್ಟ್ 4ರಂದೇ ಎನ್​ಐಎ ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ಪ್ರವೀಣ್ ನೆಟ್ಟಾರ್ ಕೊಲೆಯಾಗಿತ್ತು.