ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕೆಂದು ಸರ್ಕಾರವೇ ಕಡ್ಡಾಯ ಮಾಡಿದ್ದರೂ ಇಂದು ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಬಂದ ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ ಅವರಿಗೆ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಪ್ರಸಂಗ ನಡೆದಿದೆ.
ಶುಕ್ರವಾರ ಬೆಳಗ್ಗೆ ವಿಧಾನಸೌಧದ ಪಶ್ಚಿಮ ಗೇಟ್‌ಗೆ ಆಗಮಿಸಿದ ಪ್ರತಾಪ್‌ಸಿಂಹ ಮಾಸ್ಕ್ ಧರಿಸದೇ ಇರುವುದನ್ನು ಅಲ್ಲಿದ್ದ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರು ಗಮನಿಸಿದರು. ನೇರವಾಗಿ ಒಳಹೋಗುತ್ತಿದ್ದ ಅವರನ್ನು ಕೈ ಮಾಡಿ ನಿಲ್ಲಿಸಿದರು. ‘‘ಸಾರ್, ಮಾಸ್ಕ್ ಹಾಕಿಕೊಂಡೇ ಬರಬೇಕು’’ ಎಂದು ಸೂಚಿಸಿದರು. ಇದರಿಂದ ವಿಚಲಿತರಾಗದ ಪ್ರತಾಪ್‌ಸಿಂಹ, ತಕ್ಷಣವೇ ತಮ್ಮ ತಪ್ಪು ಅರಿತುಕೊಂಡು ವಾಪಸ್ ಕಾರಿನತ್ತ ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿನ್ನೆಯಷ್ಟೇ ರಾಜ್ಯ ಸರ್ಕಾರ ಮಾಸ್ಕ್ ದಿನ ಆಚರಿಸಿ, ಮಾಸ್ಕ್ ಧರಿಸುವುದರ ಕುರಿತು ಜಾಗೃತಿ ಮೂಡಿಸಿದೆ. ಅದಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ 200 ರೂ. ದಂಡ ವಿಧಿಸುವುದಾಗಿಯೂ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ.