ಜಿಲ್ಲೆ

'ಎಲ್ಲರನ್ನೂ ಬ್ರದರ್ ಎನ್ನುವ ಎಚ್​ಡಿಕೆ ಮಾತು ಟ್ರೆಂಡ್ ಆಗಿತ್ತು, ಈಗಿನ ಪರಿಸ್ಥಿತಿ ಬಗ್ಗೆ ಮಾತಾಡಲ್ಲ'

ಮೈಸೂರು: ಕಾಂಗ್ರೆಸ್ ಸಹವಾಸ ಮಾಡಿ ಕೆಟ್ಟೆ ಎಂಬ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್​ ಸಿಂಹ ಕುಮಾರಸ್ವಾಮಿ ಅವರಿಗೆ ತಡವಾಗಿ ಈ ಬಗ್ಗೆ ಅರಿವಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಎಚ್​ಡಿಕೆ ಬಿಜೆಪಿ ಜತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು. ಅವರ 20 ತಿಂಗಳ ಆಡಳಿತ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಗ್ರಾಮ ವಾಸ್ತವ್ಯ, ಜನರ ಜತೆ ಬೆರೆಯುವ ನಡೆ ಅವರಿಗೆ ಹೆಸರು ತಂದುಕೊಟ್ಟಿತ್ತು ಎಂದು ಎಚ್​ಡಿಕೆ ಪರ ಬ್ಯಾಟ್​ ಬೀಸಿದರು.

ಎಲ್ಲರನ್ನೂ ಬ್ರದರ್ ಎನ್ನುವ ಅವರ ಮಾತು ಸಾಕಷ್ಟು ಟ್ರೆಂಡ್ ಆಗಿತ್ತು. ಚಿಕ್ಕ ವಯಸ್ಸಿನಲ್ಲೇ ಸಿಎಂ ಆಗಿದ್ದ ಕುಮಾರಸ್ವಾಮಿ ಬಗ್ಗೆ ನಾನು ಲೇಖನ ಬರೆದಿದ್ದೆ. ಆದರೆ ಅವರ ಇಂದಿನ ಪರಿಸ್ಥಿತಿ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿ ಜತೆ ಸರ್ಕಾರ ಮಾಡಿದ್ದಾಗ ಉತ್ತಮ ಆಡಳಿತ ನಡೆಸಿದ್ದ ಬಗ್ಗೆ ಗೌರವ ಇದೆ ಎಂದು ಪ್ರತಾಪ್​ ಸಿಂಹ​ ತಿಳಿಸಿದರು. (ದಿಗ್ವಿಜಯ ನ್ಯೂಸ್​)