More

    ಹಳೇ ದೋಸ್ತಿ ಹೊಸ ಕುಸ್ತಿ: ತಾರಕಕ್ಕೇರಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಜಟಾಪಟಿ

    ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿರುವಾಗ, ಪ್ರತಿಪಕ್ಷಗಳಾಗಿ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ತೆರೆಸಿ ಸಂಕಷ್ಟಗಳನ್ನು ಬಗೆಹರಿಸಲು ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಬೇಕಾದ ವಿಪಕ್ಷಗಳ ಪ್ರಮುಖ ನಾಯಕರಿಬ್ಬರು ಹೊಣೆಗಾರಿಕೆ ಮರೆತು ಟೀಕೆ, ಪ್ರತಿಟೀಕೆ ಮೂಲಕ ಪರಸ್ಪರ ಕಾಲೆಳೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಒಂದೂವರೆ ವರ್ಷದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹೊಸ ಯುದ್ಧ ಸಾರಿರುವುದು ಕಳೆದು ಕೊಂಡಿರುವ ರಾಜಕೀಯ ವರ್ಚಸ್ಸನ್ನು ಮತ್ತೆ ಪಡೆದು ಕೊಳ್ಳುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.

    ಮೈತ್ರಿ ಸರ್ಕಾರದ ಪತನ ಬಳಿಕ ಹಾವು-ಮುಂಗುಸಿಯಂತಾಗಿರುವ ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ವಾಕ್ಸಮರ ರೋಚಕ ಘಟ್ಟ ತಲುಪಿದೆ. ಯಡಿಯೂರಪ್ಪ ಸಿಎಂ ಆದ ಮೇಲೆ ಬಿಜೆಪಿ ಬಗ್ಗೆ ತುಸು ಮೃದು ಧೋರಣೆ ತಳೆದಿರುವ ಕುಮಾರಸ್ವಾಮಿಗೆ ಈಗ ಸಿದ್ದರಾಮಯ್ಯ ಅವರೇ ನೇರ ಟಾರ್ಗೆಟ್. ಉಪ ಚುನಾವಣೆ ಸೋಲಿನ

    ನಂತರವಂತೂ ಕುಮಾರಸ್ವಾಮಿ ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ಪ್ರತಿಪಕ್ಷ ನಾಯಕರ ವಿರುದ್ಧ ಸಮಯ ಸಿಕ್ಕಾಗಲೆಲ್ಲ ಮುಗಿಬೀಳುತ್ತಿದ್ದಾರೆ. ತಮ್ಮೆಲ್ಲ ಸೋಲಿಗೆ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಕೆಂಡಕಾರುತ್ತಿದ್ದಾರೆ.

    ಸಿದ್ದರಾಮಯ್ಯ ಸಹ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡುತ್ತಿದ್ದಾರೆ. ಅವರಿಗೆ ಆಡಳಿತ ಪಕ್ಷ ಬಿಜೆಪಿಗಿಂತ ಹಳೆಯ ದೋಸ್ತಿ ಜೆಡಿಎಸ್ ಮೊದಲ ಶತ್ರುವಾಗಿದೆ.

    ಬಲೆಯಲ್ಲಿ ಬಿದ್ದು ಹಾಳಾದೆ: ‘ಮಾಜಿ ಸಿಎಂ ಸಿದ್ದರಾಮಯ್ಯ ಪೂರ್ವಯೋಜಿತವಾಗಿ ರೂಪಿಸಿದ ಬಲೆಯಲ್ಲಿ ಬಿದ್ದು ನಾನು ಹಾಳಾದೆ. ನನ್ನ ಗುಡ್​ವಿಲ್​ಗೆ ಕಲ್ಲು ಹಾಕಿದರು’ಎಂದು ಕುಮಾರಸ್ವಾಮಿ ಮೈಸೂರಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಬಿಜೆಪಿ ಜತೆಗೆ ಸಂಬಂಧ ಇಟ್ಟುಕೊಂಡಿದ್ದರೆ ಇವತ್ತಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತಿದ್ದೆ’ ಎಂದು ಹೇಳಿರುವುದು ಬಿಜೆಪಿಯಲ್ಲಿಯೂ ಚರ್ಚೆಗೆ ಕಾರಣವಾಗಿದೆ.

    ಬೆಳಗಾವಿಯಲ್ಲಿ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಗುಡ್​ವಿಲ್ ಇದ್ದರೆ ತಾನೆ ಹಾಳಾಗುವುದು. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.

    ಕುಮಾರಸ್ವಾಮಿ ಸತ್ಯ ಸಂಗತಿಗಳನ್ನು ಹೇಳುತ್ತಿದ್ದಾರೆ.
    
    | ಯಡಿಯೂರಪ್ಪ ಸಿಎಂ
    ಎಚ್.ಡಿ.ಕುಮಾರಸ್ವಾಮಿಗೆ ತಡವಾಗಿ ಜ್ಞಾನೋದಯ ಆಗಿದೆ.
    
    | ನಳಿನ್​ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

    ಕುಮಾರಸ್ವಾಮಿ

    • ಬಿಜೆಪಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದರೆ ಇವತ್ತಿಗೂ ನಾನೇ ಸಿಎಂ ಆಗಿರುತ್ತಿದ್ದೆ
    • ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ನನ್ನನ್ನು ಟ್ರಾ್ಯಪ್ ಮಾಡಿದರು. ಇದಕ್ಕಾಗಿ ಅವರು ದೇವೇ ಗೌಡರನ್ನು ಭಾವನಾತ್ಮಕ ವಾಗಿ ಬಳಸಿ, ನಮ್ಮ ಶಕ್ತಿ ಕುಂದುವಂತೆ ಮಾಡಿದರು
    • ಜನರ ದಾರಿ ತಪ್ಪಿಸಿ ರಾಜಕಾರಣ ಮಾಡಲ್ಲ. ಕೃಷ್ಣಾದಲ್ಲಿ ಬಿಎಸ್​ವೈ ಅವರನ್ನು ಭೇಟಿ ಮಾಡಿದ್ದೆ. ಸಿದ್ದರಾಮಯ್ಯ ಕದ್ದುಮುಚ್ಚಿ ಭೇಟಿ ಮಾಡಿದ್ದಾರೆ
    • ಮೂರು ಚುನಾವಣೆಯಲ್ಲಿ ನಾವು ಯಾರ ಹಂಗೂ ಇಲ್ಲದೆ 40 ಸೀಟು ಪಡೆಯುತ್ತಿದ್ದೆವು. 12 ವರ್ಷ ರಾಜಕೀಯದಲ್ಲಿ ಪಡೆದ ಒಳ್ಳೆಯ ಹೆಸರನ್ನು ಹಾಳುಮಾಡಿದರು. ತಂದೆ ಮಾತು ಕೇಳಿ ಅವರ ಮನಸ್ಸಿಗೆ ನೋಯಿಸಬಾರದು ಎಂದು ಕಾಂಗ್ರೆಸ್ ಜತೆ ಹೋದೆ. ಆದರೆ, ಸಿದ್ದರಾಮಯ್ಯ ಅವರ ಗುಂಪು ನನ್ನನ್ನು ಸರ್ವನಾಶ ಮಾಡಿತು.
    • ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದೇ ತಿಂಗಳಲ್ಲಿ ಅವರು ಮಾಡುತ್ತಿದ್ದ ದ್ರೋಹ ಗೊತ್ತಾಗಿ ನಾನು ಕಣ್ಣೀರು ಹಾಕಿದೆ. ಈ ಹಿಂದೆ ಬಿಜೆಪಿ ಜತೆಗಿನ ಮೈತ್ರಿ ವೇಳೆ ಮಾಡದಷ್ಟು ದ್ರೋಹವನ್ನು ಕಾಂಗ್ರೆಸ್ ನನಗೆ ಮಾಡಿತ್ತು.
    • ಕುಮಾರಸ್ವಾಮಿ ಸಿಎಂ ಆಗಿದ್ದರೆ ನಮಗೇನು ಸಿಗುತ್ತೆ. ಯಡಿಯೂರಪ್ಪ 6 ತಿಂಗಳು ಕಾಲ ಸಿಎಂ ಆಗಿದ್ದುಕೊಂಡು ವಾಪಸ್ ಹೋಗುತ್ತಾರೆ. ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ಕನಸು ಕಂಡಿದ್ದರು.
    • ನಮ್ಮ ಕುಟುಂಬಕ್ಕೊಂದು ಶಾಪವಿದೆ. ನಾವು ಯಾರನ್ನ ಬೆಳೆಸುತ್ತೇವೋ ಅಂಥವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕು ಎನ್ನುವುದು ನಮಗಿನ್ನೂ ತಿಳಿಯುತ್ತಿಲ್ಲ. ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪವಿಮೋಚನೆ ಮಾಡಿಕೊಳ್ಳುತ್ತೇವೆ.
    • ಜೆಡಿಎಸ್ ಬದುಕಿದ್ದರೆ ನಾವು ಬದುಕಿರುತ್ತೇವೆ. ಇಲ್ಲದಿದ್ದರೆ ನಾವು ಸಾಯುತ್ತೇವೆ ಎಂದು ಕಾಂಗ್ರೆಸ್​ನವರಿಗೆ ಗೊತ್ತಾಗಿದೆ. ಕಾಂಗ್ರೆಸ್ ಸೋಲು-ಗೆಲುವಿನಲ್ಲಿ ಜನತಾದಳದ ಪಾತ್ರವಿದೆ ಎಂಬುದನ್ನು ಶಿರಾ ಚುನಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಆಡಿರುವ ಮಾತಿನಲ್ಲೇ ಅರ್ಥ ಮಾಡಿಕೊಳ್ಳಬಹುದು.
    • ಬಿಜೆಪಿಗೆ 105 ಸ್ಥಾನ ಗಿಫ್ಟ್ ಕೊಟ್ಟಿದ್ದೇ ಸಿದ್ದರಾಮಯ್ಯ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಪ್ರಚಾರ ಮಾಡಿದ್ದರು. ಇದರಿಂದಲೇ ಬಿಜೆಪಿಗೆ 105 ಸೀಟು ಬಂತು. ಇಲ್ಲವಾಗಿದ್ದರೆ ಬಿಜೆಪಿ 70-80 ಕ್ಕೆ ಬಿದ್ದುಹೋಗುತ್ತಿತ್ತು.

    ಸಿದ್ದರಾಮಯ್ಯ

    • ಕಾಂಗ್ರೆಸ್ ಸೀಟು ಹೆಚ್ಚಿದ್ದರೂ ಕಡಿಮೆ ಇರುವ ಜೆಡಿಎಸ್​ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿದ್ದೆವು. ಅದೇ ತಪ್ಪಾಯ್ತಾ?
    • ಗುಡ್​ವಿಲ್ ಇದ್ದರೆ ತಾನೆ ಹಾಳಾಗೋಕೆ. ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ
    • ಓಲೈಕೆಗಾಗಿ ನಂಬಿಸಲು ಕಣ್ಣೀರು ಹಾಕುತ್ತಾರೆ. ಕಾಂಗ್ರೆಸ್ ಅವರನ್ನು ಸಿಎಂ ಮಾಡಿತಲ್ವಾ, ಅದು ಅವರಿಗೆ ಮಾಡಿದ ದ್ರೋಹವಾ?
    • ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಕಾರಣವಲ್ಲ, ಅವರ ಕಣ್ಣೀರಿಗೆ ಯಾವುದೇ ಬೆಲೆಯೂ ಇಲ್ಲ. ಕಣ್ಣೀರು ಹಾಕೋದು ಅವರ ಸಂಸ್ಕೃತಿ. ಅದು ಹೊಸದೇನಲ್ಲ.
    • ಕುಮಾರಸ್ವಾಮಿ ಮಾತಿಗೆ ಉತ್ತರವನ್ನೇ ಕೊಡಬಾರದು. ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ.
    • ಕುಮಾರಸ್ವಾಮಿ ಅವರನ್ನು ನಾವೆಲ್ಲ ಸೇರಿ ಮುಖ್ಯಮಂತ್ರಿ ಮಾಡಿದರೆ ಅವರು ಆಡಳಿತ ನಡೆಸಿದ್ದು ಎಲ್ಲಿಂದ ಗೊತ್ತ? ‘ವೆಸ್ಟೆಂಡ್ ಹೋಟೆಲ್’ನಿಂದ. ಹೋಟೆಲ್​ನಲ್ಲಿ ಕೂತು ಆಡಳಿತ ಮಾಡಲು ಸರ್ಕಾರ ಮಾಡಿದ್ದಾ?
    • ಕಾಂಗ್ರೆಸ್ ಶಾಸಕರಿಗೆ 1,900 ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರ ಮನೆಯಿಂದ ಕೊಟ್ಟಿದ್ದಾರಾ?
    • ಕುಮಾರಸ್ವಾಮಿ ಶಾಸಕರು, ಸಚಿವರ ಕೈಗೆ ಸಿಗುತ್ತಿರಲಿಲ್ಲ. ಅವರು ಯಾವಾಗ ಎಲ್ಲಿ ಇರುತ್ತಿದ್ದರೋ ಗೊತ್ತಾಗುತ್ತಿರಲಿಲ್ಲ. ಹೋಟೆಲ್​ನಿಂದಲೇ ಆಡಳಿತ ನಡೆಸುತ್ತಿದ್ದರು.
    • ದೇವೇಗೌಡರು ಯಾರನ್ನೂ ಬೆಳೆಸುವುದಿಲ್ಲ. ಕುಟುಂಬಸ್ಥರನ್ನು ಮಾತ್ರ ಬೆಳೆಸುತ್ತಾರೆ. ಆದ್ದರಿಂದ ಬೆಳೆಸಿದವರೆಲ್ಲ ಮೋಸ ಮಾಡಿದರೆಂದು ಹೇಳುವುದರಲ್ಲಿ ಅರ್ಥವಿಲ್ಲ.

    ಪಶ್ಚಾತ್ತಾಪದ ಅಸ್ತ್ರ?

    ಕಳೆದ ವಿಧಾನಸಭೆ ಚುನಾವಣೆ ಫಲಿ ತಾಂಶದ ಬಳಿಕ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಗಾದಿ ಹಿಡಿದಿದ್ದ ಎಚ್ಡಿಕೆ ನಿಲುವಿಗೆ ಜೆಡಿಎಸ್​ನಲ್ಲಿ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿತ್ತು. ಈ ಅಧಿಕಾರಮೋಹದಿಂದ ಕಾಂಗ್ರೆಸ್​ಗೆ ಲಾಭವಾದರೆ ಜೆಡಿಎಸ್ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದೆಂದು ಕಾರ್ಯಕರ್ತರು ಧ್ವನಿ ಎತ್ತಿದ್ದರು. ಆ ನಡುವೆಯೇ ಅಧಿಕಾರ ಮುಂದುವರಿಸಿದ್ದರ ಪರಿಣಾಮವಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ತಾವು ಮಾಡಿದ ತಪ್ಪನ್ನು ಅರಿತಿರುವ ಎಚ್ಡಿಕೆ ರಾಜಕೀಯವಾಗಿ ಕಳೆದುಕೊಂಡಿರುವ ವರ್ಚಸ್ಸು, ಭವಿಷ್ಯವನ್ನು ಪಡೆಯಲು ಮಾಜಿ ದೋಸ್ತಿ (ಕಾಂಗ್ರೆಸ್ ) ವಿರುದ್ಧ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಜತೆಗಿನ ಸ್ನೇಹದ ಪರಿಣಾಮದ ಪಶ್ಚಾತ್ತಾಪದ ಅಸ್ತ್ರವನ್ನು ರಾಜಕೀಯವಾಗಿ ಪ್ರಯೋಗಿಸುವ ಮೂಲಕ ಮುಂದಿನ ಹಾದಿ ಸುಗಮಗೊಳಿಸಲು ಯತ್ನಿಸಿದ್ದಾರೆ. ಉಪಚುನಾವಣೆ ಸೋಲಿನ ಬಳಿಕ, ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಎಚ್ಡಿಕೆ ಜೆಡಿಎಸ್ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಈ ದಾಳ ಉರುಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts