ಜಿಲ್ಲೆ

ಅತಂತ್ರವಾದರೂ ಭಾರತೀಯ ಜನತಾ ಪಕ್ಷಕ್ಕೇ ಅಧಿಕಾರ

| ಜಗದೀಶ ಬುರ್ಲಬಡ್ಡಿ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಕೂಡ ಸಮಬಲದ ಹೋರಾಟ ನೀಡಿದೆ. ಬಹುಮತ ಗಳಿಸಲು ವಿಫಲವಾದರೂ ಶಾಸಕರು- ಸಂಸದರ ಮತಗಳ ನೆರವಿನೊಂದಿಗೆ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.

ಸ್ಥಳೀಯರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಂತಹ ಘಟಾನುಘಟಿ ಬಿಜೆಪಿ ನಾಯಕರ ಪಡೆಯನ್ನು ಎದುರಿಸಿ ಕಾಂಗ್ರೆಸ್ ಕೂಡ ಸಮಬಲದ ಪೈಪೋಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಒಟ್ಟು 82 ಸ್ಥಾನಗಳ ಪೈಕಿ 39ರಲ್ಲಿ ಬಿಜೆಪಿ, 33ರಲ್ಲಿ ಕಾಂಗ್ರೆಸ್ ಗೆದ್ದಿವೆ. 3ರಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜಯ ದಾಖಲಿಸಿರುವುದು ಗಮನಾರ್ಹ ಅಂಶವಾಗಿದೆ. ಜಯ ಗಳಿಸಿದ 6 ಪಕ್ಷೇತರರಲ್ಲಿ ತಲಾ ಮೂವರು ಬಂಡಾಯ ಬಿಜೆಪಿ ಮತ್ತು ಬಂಡಾಯ ಕಾಂಗ್ರೆಸ್​ನವರಿದ್ದಾರೆ. ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಒಂದಿಷ್ಟು ನಿರೀಕ್ಷೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ ಖಾತೆ ತೆರೆಯಲೂ ವಿಫಲವಾಗಿದೆ.

ಇನ್ನು, ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಸ್ಥಾನದ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರಾದ ಬಿಜೆಪಿಯ 6, ಕಾಂಗ್ರೆಸ್​ನ ಒಬ್ಬರು ಸೇರಿ ಒಟ್ಟು 7 ಜನಪ್ರತಿನಿಧಿಗಳ ಮತಗಳಿವೆ (ಬಿಜೆಪಿಯ ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಜಗದೀಶ ಶೆಟ್ಟರ್, ಪ್ರದೀಶ ಶೆಟ್ಟರ್, ಅರವಿಂದ ಬೆಲ್ಲದ, ಎಸ್​ವಿ ಸಂಕನೂರ, ಅಮೃತ ದೇಸಾಯಿ ಸೇರಿ ಆರು ಮತ ಹಾಗೂ ಕಾಂಗ್ರೆಸ್​ನ ಪ್ರಸಾದ ಅಬ್ಬಯ್ಯ ಒಂದು). ಈ 7 ಮತಗಳನ್ನು ಸೇರಿಸಿದರೆ ಒಟ್ಟು ಮತಗಳ ಸಂಖ್ಯೆ 89 ಆಗುತ್ತವೆ. ಅಧಿಕಾರಕ್ಕೆ ಏರಲು ಕನಿಷ್ಠ 45 ಮತಗಳು ಬೇಕಾಗುತ್ತದೆ. ಹೀಗಾಗಿ ಸರಳ ಬಹುಮತದೊಂದಿಗೆ ಬಿಜೆಪಿ ಆಡಳಿತ ನಡೆಸಲು ಸಾಧ್ಯವಾಗಲಿದೆ. ಗೆಲುವು ಸಾಧಿಸಿರುವ ಮೂವರು ಬಂಡಾಯ ಅಭ್ಯರ್ಥಿಗಳೂ ಬಿಜೆಪಿ ಜತೆ ಕೈ ಜೋಡಿಸುವ ಸಾಧ್ಯತೆಗಳಿವೆ. ಇನ್ನು, ಕಾಂಗ್ರೆಸ್ ಅಧಿಕಾರ ಹಿಡಿಯುವುದು ಅಸಾಧ್ಯ. ಏಕೆಂದರೆ, ಎಲ್ಲ ಬಿಜೆಪಿಯೇತರರನ್ನು ಒಗ್ಗೂಡಿಸಿದರೂ ಕನಿಷ್ಠ ಬಹುಮತಕ್ಕೆ ಅಗತ್ಯವಿರುವ 45ರ ಮ್ಯಾಜಿಕ್ ಸಂಖ್ಯೆ ತಲುಪಲು ಒಂದು ಮತದ ಕೊರತೆ ಬೀಳುತ್ತದೆ.

ಎಐಎಂಐಎಂ ಸವಾಲು: ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 3 ವಾರ್ಡ್​ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ. ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಯಯ್ಯ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲೇ ಎಐಎಂಐಎಂ ಈ ಎಲ್ಲ ಗೆಲುವು ದಾಖಲಿಸಿರುವುದು ವಿಶೇಷ. ಸ್ಪರ್ಧಿಸಿದ್ದ ಒಟ್ಟು 12 ವಾರ್ಡ್​ಗಳಲ್ಲಿ ಶೇ.26.55 ಮತಗಳನ್ನು ಬಾಚಿಕೊಂಡಿದೆ. ಈ ಮೂಲಕ ಅಲ್ಪಸಂಖ್ಯಾತರ ಮತ ಬ್ಯಾಂಕ್​ಗೆ ಲಗ್ಗೆ ಇಟ್ಟು, ಕಾಂಗ್ರೆಸ್ ಪಾಳಯದಲ್ಲಿ ಭೀತಿ ಮೂಡಿಸಿದೆ.

ಕೈಗೆ ಬೆಲ್ಲದಂತ ಫಲಿತಾಂಶ!: ಮುಖ್ಯಮಂತ್ರಿ ರೇಸ್​ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲ ಸಾಕಷ್ಟು ವೃದ್ಧಿಸಿದೆ. ಹಿಂದಿನ ಪಾಲಿಕೆ ಚುನಾವಣೆಗೆ ಹೋಲಿಸಿದರೆ, ಇಲ್ಲಿ ಕಾಂಗ್ರೆಸ್ ಶೇ. 12.91 ಹೆಚ್ಚು ಮತಗಳನ್ನು ಪಡೆದಿದೆ. ಇನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿನಿಧಿಸುವ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶೇ.45.86 (ಕಳೆದ ಬಾರಿಗಿಂತ ಶೇ.13.68 ಅಧಿಕ) ಮತಗಳನ್ನು ಪಡೆದುಕೊಂಡಿದೆ.

Power to the Bharatiya Janata Party