ಕಾರವಾರ: ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯಲಾಗುತ್ತಿದೆ. ಪ್ರಜೆಗಳು ತಮ್ಮ ಇಷ್ಟದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ತಮ್ಮ ಅಧಿಕಾರವನ್ನು ಚಲಾಯಿಸುವ ಮತದಾನದ ದಿನದಂದು ಮತದಾರರು ಮತಗಟ್ಟೆಗೆ ಆಗಮಿಸಲು ಅನುಕೂಲವಾಗುವಂತೆ ಎಲ್ಲ ರೀತಿಯ ಸಿದ್ದತೆಗಳನ್ನು ಹಾಗೂ ಮತದಾರರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಿದ್ದತೆ ಮಾಡಿಕೊಳ್ಳುವ ಮೂಲಕ ಮತಗಟ್ಟೆಯಲ್ಲಿನ ಸಮಸ್ಯೆಯಿಂದ ಯಾವುದೇ ಮತದಾರರ ಮತದಾನದಿಂದ ಹೊರಗುಳಿಯದಂತೆ ಅತ್ಯಂತ ಎಚ್ಚರಿಕೆ ವಹಿಸಲಾಗುತ್ತದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು ವಿಕಲಚೇತನರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವರಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದೆ. ಆದರೆ ಜಿಲ್ಲೆಯ ಬಹುತೇಕ ಹಿರಿಯ ನಾಗರೀಕರು ಮತ್ತುವಿಕಲಚೇತನರು ಚುನಾವಣಾ ಆಯೋಗ ಒದಗಿಸಿರುವ, ಮನೆಯಿಂದಲೇ ಮತದಾನ ಮಾಡುವ ಈ ಸೌಲಭ್ಯವನ್ನು ಬಳಸಿಕೊಳ್ಳದೇ, ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.
ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಪಡೆಯಲು ಅರ್ಹರಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮನೆಯಿಂದ ಮತದಾನ ಮಾಡಲು ತಮ್ಮ ಒಪ್ಪಿಗೆ ನೀಡುವಂತೆ ಈಗಾಗಲೇ ವಿತರಿಸಿರುವ 12ಡಿ ನಮೂನೆಯ 7835 ಫಾರಂ ಗಳಿಗೆ 2580 ಮಂದಿ ಹಿರಿಯ ನಾಗರೀಕರು ಮಾತ್ರ ತಮ್ಮ ಒಪ್ಪಿಗೆ ಪತ್ರವನ್ನು ನೀಡಿದ್ದು, 15583 ವಿಲಕಚೇತನರಲ್ಲಿ 1765 ಮಂದಿ ಮಾತ್ರ ತಮ್ಮ ಒಪ್ಪಿಗೆ ಸೂಚಿಸುವ ಮೂಲಕ, ಬಹುತೇಕ ಮಂದಿ ಮತಗಟ್ಟೆಗೆ ಬಂದು ತಮ್ಮ ಅಧಿಕಾರ ಚಲಾಯಿಸುವುದಾಗಿ ತಿಳಿಸಿದ್ದಾರೆ.
ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 12 ಡಿ ಫಾರಂ ಪಡೆದಿರುವ 85 ವರ್ಷ ಮೇಲ್ಪಟ್ಟ 1116 ಹಿರಿಯ ನಾಗರೀಕರಲ್ಲಿ 296 ಮಂದಿ, ಕಿತ್ತೂರಿನ 332 ಮಂದಿಯಲ್ಲಿ 244, ಭಟ್ಕಳದ 1119 ರಲ್ಲಿ 338, ಹಳಿಯಾಳದ 688 ರಲ್ಲಿ 30, ಕಾರವಾರದ 1159 ರಲ್ಲಿ 723, ಕುಮಟಾದ 1007 ರಲ್ಲಿ 285, ಶಿರಸಿಯ 1342 ರಲ್ಲಿ 554 ಮತ್ತು ಯಲ್ಲಾಪುರದ 1072 ರಲ್ಲಿ 110 ಮಂದಿ ಮಾತ್ರ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.
ವಿಕಲಚೇತನ ಮತದಾರರಿಗೆ ಸಂಬAಧಿಸಿದAತೆ, ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 12 ಡಿ ಫಾರಂ ಪಡೆದಿರುವ 2251 ವಿಕಲಚೇತನ ಮತದಾರರಲ್ಲಿ 300 ಮಂದಿ, ಕಿತ್ತೂರಿನ 566 ಮಂದಿಯಲ್ಲಿ 216, ಭಟ್ಕಳದ 2770 ರಲ್ಲಿ 270, ಹಳಿಯಾಳದ 1705 ರಲ್ಲಿ 32, ಕಾರವಾರದ 2499 ರಲ್ಲಿ 480, ಕುಮಟಾದ 2750 ರಲ್ಲಿ 175, ಶಿರಸಿಯ 2047 ರಲ್ಲಿ 230 ಮತ್ತು ಯಲ್ಲಾಪುರದ 2084 ರಲ್ಲಿ 62 ಮಂದಿ ಮಾತ್ರ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.
ಈಗಾಗಲೇ ಗುರುತಿಸಲಾಗಿರುವ 85 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರ ಮತ್ತು ಎಲ್ಲಾ ವಿಕಲಚೇತನರ ಮನೆಗಳಿಗೆ ಬಿ.ಎಲ್.ಓ ಗಳು ತೆರಳಿ 12ಡಿ ಫಾರಂ ವಿತರಿಸಿದ್ದು, ಮನೆಗಳಿಗೆ ಭೇಟಿ ನೀಡಿದಾಗ ಮನೆಗಳಲ್ಲಿ ಯಾರೂ ಇಲ್ಲದಿದಲ್ಲಿ ಮರುದಿನ ಮತ್ತೆ ಮನೆಗಳಿಗೆ ಭೇಟಿ ನೀಡಿ ಫಾರಂ ವಿತರಿಸಿದ್ದು, ಅವರಿಂದ ಒಪ್ಪಿಗೆ / ನಿರಾಕರಣೆ ಪತ್ರಗಳನ್ನು ಸ್ವೀಕರಿಸುತ್ತಿದ್ದಾರೆ. ಯಾವುದೇ ಅರ್ಹ ವಿಕಲಚೇತನರು ಮತ್ತು ಹಿರಿಯ ನಾಗರೀಕರು ಈ ಸೌಲಭ್ಯ ಪಡೆಯುವಲ್ಲಿ ವಂಚಿತರಾಗದAತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ.
ಚುನಾವಣಾ ಆಯೋಗ ನೀಡಿರುವ ಸೌಲಭ್ಯ ನಿರಾಕರಿಸಿ, ಮತದಾನ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸಿ , ತಮ್ಮ ಹಕ್ಕು ಚಲಾಯಿಸುವ ಸಂಭ್ರಮವನ್ನು ಆಚರಿಸಿಕೊಳ್ಳಲು ಜಿಲ್ಲೆಯ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಉತ್ಸಾಹ ತೋರಿದ್ದು, ಅದರಲ್ಲಿ ತೀರಾ ಅವಶ್ಯಕತೆಯಿರುವ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾಡಳಿತ ಈಗಾಗಲೇ ಯೋಜನೆ ರೂಪಿಸಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ಕಾರ್ಯಕರ್ತರಲ್ಲಿ ವಿಶ್ವಾಸ
ಚುನಾವಣಾ ಪರ್ವ, ದೇಶದ ಗರ್ವ ಎಂಬ ಚುನಾವಣಾ ಆಯೋಗದ ಸಂದೇಶದಂತೆ, ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಮತದಾರರು ಒಟ್ಟಾಗಿ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಅಚರಿಸಬೇಕಿದೆ. ಲೋಕಸಭಾ ಕ್ಷೇತ್ರದ ಬಹುತೇಕ ಹಿರಿಯ ನಾಗರೀಕರು ಮತ್ತು ವಿಕಲಚೇತನರು ತಮಗೆ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡಲು ನೀಡಿರುವ ಸೌಲಭ್ಯದ ಬದಲು ಮತಗಟ್ಟೆಗೆ ಬಂದು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿದ್ದು, ಇದು ಇತರೆ ಎಲ್ಲಾ ಸಾಮಾನ್ಯ ಮತದಾರರಿಗೂ ಉತ್ತಮ ಸಂದೇಶ ನೀಡುವ ಜೊತೆಗೆ ಪ್ರೇರಣೆಯಾಗಿದೆ. ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮತದಾನ ಕೇಂದ್ರಗಳಿಗೆ ಬಂದು ಮತ ಚಲಾಯಿಸಲು ಜಿಲ್ಲಾಡಳಿದ ಮೂಲಕ ಎಲ್ಲ ರೀತಿಯ ನೆರವು ನೀಡಲಾಗುವುದು. ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ.