ಹೆಬ್ರಿ: ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಬೆಳಾರ್ ಎಂಬಲ್ಲಿ ರಸ್ತೆ ಬದಿ ಮಲಗಿದ ಜಾನುವಾರನ್ನು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವಾಗ ವಾಹನ ತಡೆದು ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ, ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ. ಗೂಡ್ಸ್ ವಾಹನದಲ್ಲಿ ಹಬೀಬ್, ಬಶೀರ್ ಮತ್ತು ಆಸೀಫ್ ಇಕ್ಬಾಲ್ ಎಂಬುವರು ಸೀತಾನದಿ ವನ್ಯಜೀವಿ ಶಾಖೆ ಸೊಮೇಶ್ವರ ವನ್ಯಜೀವಿ ವಲಯದ ಅಧಿಕಾರಿಗಳು, ನಿಲ್ಲಿಸುವಂತೆ ಸೂಚನೆ ನೀಡಿದರೂ ವಾಹನ ನಿಲ್ಲಿಸದೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ನೆಲ್ಲಿಕಟ್ಟೆ-ಕೂಡ್ಲು ಕಡೆಯಿಂದ ಹೋಗುವಾಗ ಅಜ್ಜೋಳ್ಳಿ ದರ್ಖಾಸು ಸೇತುವೆ ಬಳಿ ಚಾಲಕ ಹಬೀಬ್ ಮತ್ತು ಬಶೀರ್ ಎಂಬುವರು ಚಲಿಸುತ್ತಿರುವ ವಾಹನದಿಂದ ಜಿಗಿದು ತಪ್ಪಿಸಿಕೊಂಡು ಹೋಗಿದ್ದಾರೆ. ಆಸೀಫ್ ಇಕ್ಬಾಲ್, ಗೂಡ್ಸ್ ವಾಹನ ಮತ್ತು ಮೃತಪಟ್ಟ ಜಾನುವಾರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.