ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸ್ಥಳೀಯರ ಹಿತಾಸಕ್ತಿ ಕಾಯ್ದುಕೊಂಡು ಹೆಜಮಾಡಿ ಬಂದರು ನಿರ್ಮಾಣ ಕಾಮಗಾರಿ ನಡೆಸುವಂತೆ ಬಂದರು ಇಲಾಖೆಗೆ ಸೂಚಿಸಲಾಗುವುದು ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದರು.
100 ಕೋಟಿಗೂ ಅಧಿಕ ವೆಚ್ಚದ ಹೆಜಮಾಡಿ ಬಂದರು ನಿರ್ಮಾಣಕ್ಕಾಗಿ ಪ್ರಕೃತಿದತ್ತ ಅಳಿವೆ ಮುಚ್ಚಿ ಹೊಸದಾಗಿ ನಿರ್ಮಿಸಿರುವ ಅಳಿವೆಯಿಂದ ನಡಿಕುದ್ರು ಪ್ರದೇಶಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳ ದೂರಿನಂತೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನಡಿಕುದ್ರು ದ್ವೀಪದ ದಕ್ಷಿಣ ಭಾಗ ಶಾಂಭವಿ ಹಾಗೂ ನಂದಿನಿ ನೀರು ಕಡಲಿಗೆ ಸೇರುವ ಪ್ರದೇಶ. ಈ ಹಿಂದೆ ಪ್ರಕೃತಿದತ್ತ ಅಳಿವೆಯಾಗಿದ್ದು, ನದಿ ನೀರು ಸರಾಗವಾಗಿ ಹರಿದು ಸಮಸ್ಯೆ ಬರುತ್ತಿರಲಿಲ್ಲ. ಬಂದರು ಕಾಮಗಾರಿ ಪ್ರಾರಂಭವಾಗಿ ಇದೀಗ ಪ್ರಕೃತಿದತ್ತ ಅಳಿವೆ ಮುಚ್ಚಿ ಅಳಿವೆ ಹಿಂದಿನ ಉತ್ತರಭಾಗದಲ್ಲಿ ಹೊಸ ಅಳಿವೆ ನಿರ್ಮಿಸಿ, ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ನಡೆದು ಉಳಿದ ಕಾಮಗಾರಿ ಸ್ಥಗಿತಗೊಂಡಿವೆ. 2021ರಲ್ಲಿ ತೌಖ್ತೆ ಚಂಡಮಾರುತ ಪರಿಣಾಮ ಸಮುದ್ರದ ನೀರು ಹೆಚ್ಚಳವಾಗಿ ಕೃಷಿ ಭೂಮಿಗೆ ಉಪ್ಪು ನೀರು ಪ್ರವೇಶಿಸಿ, ಬೆಳೆ ಹಾನಿಯಾಗಿತ್ತು. ಇದರಿಂದ ನಡಿಕುದ್ರು ಪ್ರದೇಶದ ಕೃಷಿಕರಿಗೆ ಕುಡಿಯುವ ನೀರು ಮತ್ತು ಭತ್ತದ ಬೆಳೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 60 ಎಕರೆಗೂ ಮಿಕ್ಕಿ ಅಧಿಕ ಕೃಷಿ ಭೂಮಿ ಹಾಗೂ 30 ಬಾವಿಗಳಿಗೆ ಹಾನಿ ಉಂಟಾಗಿತ್ತು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಕೃತಕ ಅಳಿವೆ ಕಾಮಗಾರಿ ಪೂರ್ಣವಾಗದೆ ಶಾಂಭವಿ ನದಿ ನೀರು ಸರಾಗವಾಗಿ ಹರಿಯದೆ ನೆರೆ ಭೀತಿ ಉಂಟಾಗಿದೆ. ನದಿ ನೀರು ಉಕ್ಕೇರಿ ಬಂದು ಮನೆ, ತೋಟ ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಉತ್ತಮ ವೈಜ್ಞಾನಿಕ ರಕ್ಷಣಾ ತಡಗೋಡೆ ನಿರ್ಮಾಣವಾಗಬೇಕು. ಡ್ರೆಜಿಂಗ್ ಮಾಡಿದಾಗ ಉಪ್ಪು ನೀರು ಹರಿದು ಬಂದು ಬೆಳೆ ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರು.
ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್ ಸ್ಥಳೀಯರಾದ ಸುಧೀರ್ ಕರ್ಕೇರ, ವಾಮನ ಕೋಟ್ಯಾನ್, ಉಮೇಶ್ ಕೋಟ್ಯಾನ್ ಮತ್ತಿತರರಿದ್ದರು.
ಹೆಜಮಾಡಿ ಕಡಲತಡಿಯಲ್ಲಿ ಮಹತ್ವಾಕಾಂಕ್ಷೆ ಬಂದರು ಕಾಮಗಾರಿ ಅತ್ಯುತ್ತಮವಾಗಿ ನಿರ್ಮಾಣಗೊಳ್ಳುತ್ತಿದೆ. ನಡಿಕುದ್ರು ನಿವಾಸಿಗಳ ಮನವಿ ಬಂದರು ಇಲಾಖೆ ಗಮನಕ್ಕೆ ತರಲಾಗುವುದು. ಸ್ಥಳೀಯರ ಹಿತಾಸಕ್ತಿ ಕಾಯ್ದುಕೊಂಡು ಕಾಮಗಾರಿ ಮುಂದುವರಿಸಲು ಸೂಚನೆ ನೀಡಲಾಗುವುದು ಎಂದು ತಹಸೀಲ್ದಾರ್ ವಿವರಿಸಿದರು.