ಅಳವಂಡಿಯ ಶ್ರೀಶಿವಮೂರ್ತಿಸ್ವಾಮಿ ಇನಾಮದಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು. 
ಜಿಲ್ಲೆ

ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ

Gangavati - Desk - Veeresh S Ullagaddi

ಅಳವಂಡಿ: ಜನಸಂಖ್ಯಾ ಹೆಚ್ಚಳದಿಂದ ಅನಕ್ಷರತೆ, ಬಡತನ, ಆಹಾರ, ಅರ್ಥಿಕ ಸಮಸ್ಯೆ ಹೆಚ್ಚಳವಾಗಲಿದ್ದು, ನೀರು, ವಸತಿ ಹಾಗೂ ಮೂಲಭೂತ ಸೌಕರ್ಯ ಹಾಗೂ ಸಂಪನ್ಮೂಲಗಳ ಅಭಾವವಾಗಲಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯ ಅನುಷ್ಠಾನಾಧಿಕಾರಿ ಡಾ.ಎಮ್.ಎಚ್.ರವೀಂದ್ರನಾಥ ಹೇಳಿದರು.


ಗ್ರಾಮದ ಶ್ರೀಶಿವಮೂರ್ತಿಸ್ವಾಮಿ ಇನಾಮದಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ದೇಶಕ್ಕೆ ಮಗುವಿನ ಸಾಧನೆ ಮುಖ್ಯ

ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು ಮಕ್ಕಳ ಜನಿಸುವಿಕೆ ಸಾಧನೆಯಲ್ಲ. ಕುಟುಂಬ ಕಲ್ಯಾಣ ಯೋಜನೆ ಅಳವಡಿಸಿಕೊಂಡು ಸಂತೋಷ, ಸಮೃದ್ದಿಯ ಜೀವನ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡೋಣ. ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜನಸಂಖ್ಯೆ ಹೆಚ್ಚಾದಷ್ಟು ಜೀವನದ ಆರ್ಥಿಕ ಮೌಲ್ಯ ಕುಸಿಯಲಿದೆ ಎಂದರು.

ಚೀನಾ ಮತ್ತು ಭಾರತದ ನಡುವೆ ಪೈಪೋಟಿ

ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಇಡೀ ವಿಶ್ವದಲ್ಲಿ ಜನಸಂಖ್ಯೆಗೆ ಸಂಬಂದಿಸಿದಂತೆ ಚೀನಾ ಮತ್ತು ಭಾರತದ ನಡುವೆ ಪೈಪೋಟಿ ನಡೆದಿದೆ. ಜನಸಂಖ್ಯೆ ಹೆಚ್ಚಳದಿಂದ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿವೆ ಎಂದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ಬಾಲ್ಯ ವಿವಾಹಗಳಿಂದ ತಾಯಿ ಹಾಗೂ ಶಿಶು ಮರಣ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಇನ್ನೂ ಉಳಿದಿರುವ ಕೆಲ ಅನಿಷ್ಟ ಪದ್ದತಿಯಿಂದ ಜನಸಂಖ್ಯೆ ಏರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದರು.


ವೈದ್ಯಾಧಿಕಾರಿ ಡಾ.ಚಂದ್ರಶೇಖರ ಮೇಟಿ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ, ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ಪ್ರದೀಪ, ಈಶಪ್ಪ, ಗೋಣಿಬಸಪ್ಪ, ವೀರಭದ್ರಪ್ಪ, ಮಹೇಶ, ವೆಂಕಟೇಶ, ಹಸಿನಾಬಾನು, ಸಿದ್ದು, ಬೋರಯ್ಯ, ವಿಜಯಕುಮಾರ, ಬಸವರಾಜ, ಸಿದ್ದಾಚಾರಿ, ಗೌತಮಿ, ಮಹೇಶ ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು,