ಸಿಂಧನೂರು: ತಾಲೂಕಿನ ಮಲ್ಲಾಪುರ ಕ್ರಾಸ್‌ದಿಂದ ಗೀತಾಕ್ಯಾಂಪ್‌ವರೆಗೆ ಎರಡು ತಿಂಗಳಿಂದೆಯಷ್ಟೇ ರಿಪೇರಿ ಮಾಡಿದ್ದ ಡಾಂಬರೀಕರಣ ರಸ್ತೆ ಕಿತ್ತು ಹೋಗಿದೆ.
ಕಳೆದ ವರ್ಷ ರಸ್ತೆಯನ್ನು ಡಾಂಬರೀಕರಣಕ್ಕೆ 3 ಕೋಟಿ ರೂ. ಮಂಜೂರಾಗಿತ್ತು. ಆದರೆ ರಸ್ತೆ ನಿರ್ಮಾಣ ಕಾರ್ಯದಲ್ಲಿ ವಿಳಂಬ ಮಾಡಲಾಯಿತು. ಇದರ ಪರಿಣಾಮ ರಸ್ತೆಗೆ ಹಾಕಿದ್ದ ಜಲ್ಲಿಕಲ್ಲಿನಿಂದ ಬೈಕ್ ಸ್ಕೀಡ್ ಆಗಿ ಮೂವರು ಮೃತಪಟ್ಟಿದ್ದರು. ಆದರೂ ರಸ್ತೆ ಸುಧಾರಣೆಗೆ ಮುಂದಾಗಿರಲಿಲ್ಲ.
ಕೊನೆಗೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯೇ ಮುತುವರ್ಜಿ ವಹಿಸಿ, ಜನರಿಂದ ಸಾಕಷ್ಟು ದೂರುಗಳು ಬಂದಿದ್ದು ರಸ್ತೆ ಮಾಡಿಕೊಡಬೇಕೆಂದು ಗುತ್ತಿಗೆದಾರರಲ್ಲಿ ಸೂಚಿಸಿದಾಗ ರೋಡ್‌ಗೆ ಡಾಂಬರ್ ಹಾಕಿದ್ದಾರೆ. ಎರಡು ತಿಂಗಳ ಕಳೆಯುವುದರ ಮುನ್ನ ರಸ್ತೆಯ ಸ್ಥಿತಿ ಮೊದಲಿದ್ದ ಸ್ಥಿತಿಗೆ ಬಂದಿದೆ. ಮೂರು ಕಿಮೀ ಅಂತರದಲ್ಲಿ ಏಳೆಂಟು ಕಡೆಗಳಲ್ಲಿ ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಕಳಪೆಯಾಗಿರುವ ರಸ್ತೆಯನ್ನು ಮರು ನಿರ್ಮಾಣಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ನಾಗರಿಕರು ಒತ್ತಾಯಿಸಿದರು.
ಕಳೆದ ಎರಡು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆ ಸಿಂಕ್ ಆಗಿರುವ ಬಗ್ಗೆ ಮಾಹಿತಿ ಇದೆ. ಅಲ್ಲಲ್ಲಿ ಸಿಂಕ್ ಆಗಿರುವ ರಸ್ತೆಯನ್ನು ಮರು ನಿರ್ಮಾಣ ಮಾಡಲಾಗುವುದು. ರಸ್ತೆ ಬದಿಯಲ್ಲಿಯೂ ಮರಂ ಹಾಕಿಸಲಾಗುವುದು. ಸಿ.ಎಸ್.ಪಾಟೀಲ್ ಎಇಇ, ಲೋಕೋಪಯೋಗಿ ಇಲಾಖೆ, ಸಿಂಧನೂರು