ಜಿಲ್ಲೆ

ನಕಲಿ ಕ್ರೀಡಾ ಸಾಮಗ್ರಿ ಮಾರಾಟ, ಪೊಲೀಸರಿಂದ ದಾಳಿ

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕ್ರೀಡಾ ಸಾಮಗ್ರಿ ಮಾರಾಟ ಅಂಗಡಿಯಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ.

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕ್ರೀಡಾ ಸಾಮಗ್ರಿಗಳ ಮಾರಾಟ ಮಳಿಗೆ ಸ್ಪೋರ್ಟ್ಸ್ ವಿನ್ನರ್‌ನಲ್ಲಿ ಪ್ರತಿಷ್ಠಿತ ಕಂಪನಿಗಳಾದ ನೀವಿಯ, ಕ್ಯಾಸ್ಕೊ, ಯೇನೆಕ್ಸ್, ವೈವೈಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಹರ್ಯಾಣದ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ.ಲಿಮಿಟೆಡ್ ಸಿಬ್ಬಂದಿ ಸ್ಟೀಫನ್‌ರಾಜ್ ಎಂಬುವರು ಸೋಮವಾರ ಉಳ್ಳಾಲ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಅವರ ದೂರಿನ ಮೇರೆಗೆ ಸೋಮವಾರ ಸಂಜೆ ಎಸಿಪಿ ವಿಜಯಕ್ರಾಂತಿ ತಂಡದೊಂದಿಗೆ ಮಳಿಗೆಗೆ ದಾಳಿ ನಡೆಸಿ ನಕಲಿ ಬ್ರಾೃಂಡ್ ಉತ್ಪನ್ನಗಳನ್ನು ಜಪ್ತಿ ಮಾಡಿ ಮಳಿಗೆಯ ಮಾಲೀಕರ ವಿರುದ್ಧ ಕಾಪಿರೈಟ್ ಆಕ್ಟ್‌ನಡಿ ಪ್ರಕರಣ ದಾಖಲಿಸಿದ್ದಾರೆ.