ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಪೊಲೀಸರ ತುಪಾಕಿ ಮತ್ತೊಮ್ಮೆ ಸದ್ದು ಮಾಡಿದೆ. 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ಒಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಮುತ್ತುರಾಜ್ ಅಲಿಯಾಸ್ ಡಕ್ಕ ಎಂದು ಹೇಳಲಾಗಿದ್ದು, ಈತನ ವಿರುದ್ಧ ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದಾನೆ.
ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮುತ್ತರಾಜ್ನನ್ನು ಬಂಧಿಸಲು ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿಯ ಚಿಕ್ಕಮಲಗೂಡು ಗ್ರಾಮಕ್ಕೆ ತೆರಳಿದ್ದಾಗ ಪೊಲೀಸ್ ಪೇದೆ ಸಿದ್ದರಾಜು ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಲಗೂರು ಠಾಣೆ ಸಿಪಿವೈ ಶ್ರೀಧರ್ ಆರೋಪಿಗೆ ಸರೆಂಡರ್ ಆಗುವಂತೆ ಸೂಚಿಸಿದ್ದಾರೆ. ಇದಕ್ಕೊಪ್ಪದೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುತ್ತುರಾಜು ಅಲಿಯಾಸ್ ಡಕ್ಕ, ಕಾಂತರಾಜು ಎಂಬುವರ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಸಿಪಿಐ ಶ್ರೀಧರ್ ತನಿಖೆ ನಡೆಸುತ್ತಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಾಂತರಾಜು ಕೊಲೆಗೆ ಮತ್ತುರಾಜ್ ಅಲಿಯಾಸ್ ಡಕ್ಕ ಸುಪಾರಿ ನೀಡಿರುವುದು ಬಹಿರಂಗವಾಗಿದೆ.
ಚಿಕ್ಕಮಲಗೂಡು ಬಳಿ ರೌಡಿಶೀಟರ್ ಮುತ್ತುರಾಜ್ ಇರುವ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಹಿಡಿಯಲು ಹೋಗಿದ್ದ ವೇಳೆ ಮುತ್ತುರಾಜ್ ಕಾನ್ಸ್ಟೇಬಲ್ ಸಿದ್ದರಾಜು ಮೇಲೆ ಡ್ಯಾಗರ್ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಪಿಐ ಶ್ರೀಧರ್ ಆರೋಪಿ ಡಕ್ಕ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಮುತ್ತುರಾಜ್ ಅಲಿಯಾಸ್ ಡಕ್ಕ 11 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಮೂರು ಕೊಲೆ, ಮೂರು ಕೊಲೆಗೆ ಯತ್ನ, ಎರಡು ರಾಬರಿ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಹುಡುಗರ ಗುಂಪು ಕಟ್ಟಿಕೊಂಡು ರೌಡಿ ಚಟುವಟಿಕೆಗಳಲ್ಲಿ ಡಕ್ಕ ಭಾಗಿಯಾಗಿದ್ದಾನೆ. ಇದಲ್ಲದೆ ಇಸ್ಪೀಟ್ ದಂಧೆ ಕೂಡ ನಡೆಸುತ್ತಿದ್ದನು ಎಂದು ವರದಿಯಾಗಿದೆ.